ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಅಧ್ಯಕ್ಷರಾಗಿ ಶರದ್ ಪವಾರ್ (Sharad Pawar) ಮತ್ತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ೮೧ ವರ್ಷದ ಶರದ್ ಪವಾರ್ ಅವರೇ ಮುಂದಿನ ನಾಲ್ಕು ವರ್ಷಗಳವರೆಗೆ ಅಧ್ಯಕ್ಷರಾಗಿ ಮುಂದುವರಿಯುವ ಕುರಿತು ಅವಿರೋಧವಾಗಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
“ಶರದ್ ಪವಾರ್ ಅವರು ಎನ್‌ಸಿಪಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿರಲಿದ್ದಾರೆ” ಎಂದು ಮಹಾರಾಷ್ಟ್ರ ಎನ್‌ಸಿಪಿ ಮುಖ್ಯ ವಕ್ತಾರ ಮಹೇಶ್ ಭರತ್ ತಪಾಸೆ ತಿಳಿಸಿದ್ದಾರೆ. ೨೦೧೯ರಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆಯು ಬಿಜೆಪಿ ಜತೆಗಿನ ಮೈತ್ರಿ ತೊರೆದ ಬಳಿಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ “ಮಹಾ ವಿಕಾಸ್ ಅಘಾಡಿ” ಸರ್ಕಾರ ರಚಿಸುವಲ್ಲಿ ಪವಾರ್ ಮಹತ್ವದ ಪಾತ್ರ ನಿರ್ವಹಿಸಿದ್ದರು.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. “ಬಿಜೆಪಿ ಆಡಳಿತದಲ್ಲಿ ಜನ ಪರದಾಡುತ್ತಿದ್ದು, ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಅದರಲ್ಲೂ, ನರೇಂದ್ರ ಮೋದಿ ಅವರು ಮಹಿಳೆಯರ ಘನತೆ, ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಆದರೆ, ಗುಜರಾತ್‌ನಲ್ಲಿ ಅವರ ಪಕ್ಷವು ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡುತ್ತದೆ. ಇದಕ್ಕೆಲ್ಲ ಬಿಜೆಪಿ ಬೆಲೆ ತೆರಲಿದೆ” ಎಂದರು.
ಇದನ್ನೂ ಓದಿ | Maha politics: ಸೋಲಿನಿಂದ ಕಂಗೆಟ್ಟ ಠಾಕ್ರೆ, ಪವಾರ್‌ರಿಂದ ಈಗ ಮಧ್ಯಂತರ ಚುನಾವಣೆ ಜಪ!