ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಲು ಪ್ರತಿಪಕ್ಷಗಳು ‘ಇಂಡಿಯಾ’ ಎಂಬ ಒಕ್ಕೂಟವನ್ನು ರಚಿಸಿವೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಸಮರ ಸಾರಿವೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಎನ್‌ಸಿಪಿ ಮುಖ್ಯಸ್ಥ, ಇಂಡಿಯಾ ಒಕ್ಕೂಟದ ಸದಸ್ಯ ಶರದ್ ಪವಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಇಂಡಿಯಾ ಒಕ್ಕೂಟದ ನಾಯಕರಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.
ಪುಣೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಗಸ್ಟ್ 1ರಂದು ನರೇಂದ್ರ ಮೋದಿ ಅವರಿಗೆ ಲೋಕಮಾನ್ಯ ತಿಲಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರ ಪುಣ್ಯಸ್ಮರಣೆಯಂದೇ ತಿಲಕ್ ಸ್ಮಾರಕ ಟ್ರಸ್ಟ್‌ನಿಂದ ಮೋದಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಶರದ್ ಪವಾರ್ ಅವರು ನರೇಂದ್ರ ಮೋದಿ ಅವರ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಅಲ್ಲದೆ, ಪವಾರ್ ಅವರೇ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದು ಈಗ ‘ಇಂಡಿಯಾ’ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿಸಿದೆ.
ಇಂಡಿಯಾ ಸಭೆಯಲ್ಲಿ ಅಸಮಾಧಾನ
ಸಂಸತ್ ಭವನದಲ್ಲಿ ನಡೆದ ಇಂಡಿಯಾ ಒಕ್ಕೂಟದ ನಾಯಕರ ಸಭೆಯಲ್ಲಿ ಕೆಲ ನಾಯಕರು ಶರದ್ ಪವಾರ್ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶರದ್ ಪವಾರ್ ಅವರ ಜತೆ ಮಾತನಾಡಬೇಕು. ಮೋದಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ಶರದ್ ಪವಾರ್ ಅವರು ಭಾಗವಹಿಸದಂತೆ ತಡೆಯಬೇಕು ಎಂಬುದಾಗಿ ಖರ್ಗೆ ಅವರಿಗೆ ಕೆಲವರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Opposition Meet: ಪಕ್ಷ ಒಡೆದ ಬಳಿಕ ಶರದ್ ಪವಾರ್ ನಿರಾಸಕ್ತಿ? ಪ್ರತಿಪಕ್ಷಗಳ ಹೈವೋಲ್ಟೇಜ್ ಸಭೆಯಿಂದ ದೂರ
“ನರೇಂದ್ರ ಮೋದಿ ಅವರನ್ನು ಸೋಲಿಸಬೇಕೆಂದೇ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ಒಕ್ಕೂಟವನ್ನು ರಚಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದ ನಾಯಕರೊಬ್ಬರು ನರೇಂದ್ರ ಮೋದಿ ಅವರ ಜತೆ ವೇದಿಕೆ ಹಂಚಿಕೊಂಡರೆ ಜನರಿಗೆ ಸರಿಯಾದ ಸಂದೇಶ ರವಾನೆಯಾಗುವುದಿಲ್ಲ. ಹಾಗಾಗಿ, ಅವರು ಕಾರ್ಯಕ್ರಮಕ್ಕೆ ಹೋಗದಂತೆ ತಡೆಯಿರಿ” ಎಂಬ ಒತ್ತಾಯ ಕೇಳಿಬಂದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಶರದ್ ಪವಾರ್ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಇಂಡಿಯಾ ಒಕ್ಕೂಟದ ನಾಯಕರ ಅಸಮಾಧಾನದ ಬಳಿಕ ಶರದ್ ಪವಾರ್ ಅವರು ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.