ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ಶರದ್ ಪವಾರ್ (Sharad Pawar) ತೀರ್ಮಾನಿಸಿದ್ದಾರೆ. ರಾಜೀನಾಮೆ ನೀಡಲು ನಿರ್ಧಾರ ಮಾಡಿದ ಬಳಿಕ ಕಾರ್ಯಕರ್ತರ ಒತ್ತಡ, ಮುಖಂಡರ ಒತ್ತಾಯ, ವಿವಿಧ ರೀತಿಯಲ್ಲಿ ರಾಜಕೀಯ ವಿಶ್ಲೇಷಣೆ ಕೇಳಿಬಂದ ಬೆನ್ನಲ್ಲೇ ಶರದ್ ಪವಾರ್ ಅವರು ರಾಜೀನಾಮೆ ನೀಡದಿರುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ನನ್ನ ಪಕ್ಷದ ನಾಯಕರ ಅಭಿಪ್ರಾಯ ಹಾಗೂ ಭಾವನೆಗಳಿಗೆ ಧಕ್ಕೆ ತರಲು ಆಗುವುದಿಲ್ಲ. ಅವರೇ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಹಾಗೂ ನಾನು ಅವರನ್ನು ನಂಬುತ್ತೇನೆ. ಹಾಗಾಗಿ, ನಾನು ಅವರ ತೀರ್ಮಾನವನ್ನು ಅನುಮೋದಿಸುತ್ತಿದ್ದೇನೆ. ಹಾಗಾಗಿ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನವನ್ನು ನಾನು ಹಿಂತೆಗೆದುಕೊಳ್ಳುತ್ತಿದ್ದೇನೆ. ಹಾಗೆಯೇ, ಎನ್‌ಸಿಪಿ ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತೇನೆ” ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದು ವಿವಿಧ ರೀತಿಯ ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ,. ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಮಾಡಿದ್ದ ಟ್ವೀಟ್ ಚರ್ಚೆಗೆ ಗ್ರಾಸವಾಗಿತ್ತು. ʼʼಇನ್ನು 15 ದಿನಗಳಲ್ಲಿ ಎರಡು ದೊಡ್ಡ ರಾಜಕೀಯ ಆಸ್ಫೋಟಗಳು ನಡೆಯಲಿವೆ. ಒಂದು ದಿಲ್ಲಿಯಲ್ಲಿ, ಇನ್ನೊಂದು ಮಹಾರಾಷ್ಟ್ರದಲ್ಲಿʼʼ ಎಂದಿದ್ದರು ಅವರು. ಅದು ಏನಿರಬಹುದು ಎಂಬ ಕುತೂಹಲಕಾರಿ ಲೆಕ್ಕಾಚಾರಗಳು ಆರಂಭವಾಗಿದ್ದವು. ಹಾಗೆಯೇ, ಎನ್‌ಸಿಪಿ ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಅಧ್ಯಕ್ಷ ಸ್ಥಾನ ತ್ಯಜಿಸದಂತೆ ಶರದ್ ಪವಾರ್ ಅವರನ್ನು ಒತ್ತಾಯಿಸಿದ್ದರು.
ಇದನ್ನೂ ಓದಿ: Sharad Pawar: ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಶರದ್ ಪವಾರ್ ನಿರ್ಧಾರ
ಅಂದಹಾಗೆ, ಶರದ್ ಪವಾರ್ ಅವರು ಎನ್ಸಿಪಿಯ ಸಹಸಂಸ್ಥಾಪಕರಲ್ಲಿ ಒಬ್ಬರು. 1999ರಲ್ಲಿ ಶರದ್ ಪವಾರ್, ತಾರಿಕ್ ಅನ್ವರ್ ಮತ್ತು ಪಿ.ಎ.ಸಂಗ್ಮಾ ಸೇರಿ ಈ ಪಕ್ಷವನ್ನು ಸ್ಥಾಪಿಸಿದ್ದಾರೆ. ಆಗಿನಿಂದಲೂ ಶರದ್ ಪವಾರ್ ಅವರೇ ಎನ್‌ಸಿಪಿ ಮುಖ್ಯಸ್ಥರಾಗಿದ್ದಾರೆ. ಈ ಮೂವರೂ ಕಾಂಗ್ರೆಸ್ನಲ್ಲಿ ಇದ್ದರು. ಬಳಿಕ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಜತೆ ಭಿನ್ನಾಭಿಪ್ರಾಯ ಉಂಟಾಗಿ, ಈ ಮೂವರನ್ನೂ ಪಕ್ಷ ಉಚ್ಚಾಟನೆ ಮಾಡಿತ್ತು. ನಂತರ ಎನ್‌ಸಿಪಿ ಸ್ಥಾಪಿಸಿದ್ದರು.