ಕೊಹಿಮಾ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬ ಮಾತಿದೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದಲ್ಲಿ ಭಾರಿ ರಾಜಕೀಯ ವಿರೋಧ, ಕಿತ್ತಾಟ ಹೊಂದಿರುವ ಬಿಜೆಪಿ ಹಾಗೂ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು (ಎನ್‌ಸಿಪಿ) ಮೈತ್ರಿ ಸರ್ಕಾರದ ಭಾಗವಾಗಿವೆ. ಆ ಮೂಲಕ ರಾಜಕೀಯ, ವೈಚಾರಿಕ ವಿರೋಧಕ್ಕಿಂತ ಅಧಿಕಾರವೇ ಮುಖ್ಯ ಎಂಬುದನ್ನು ಎರಡೂ ಪಕ್ಷಗಳು ಸಾಬೀತುಪಡಿಸಿವೆ.
ಇತ್ತೀಚೆಗೆ ನಡೆದ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿಯು (NDPP) 25 ಕ್ಷೇತ್ರಗಳಲ್ಲಿ ಗೆದ್ದು ಬೃಹತ್ ಪಕ್ಷವಾಗಿ ಹೊರಹೊಮ್ಮಿದೆ. 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಎನ್‌ಡಿಪಿಪಿಯ ನೆಫಿಯೊ ರಿಯೋ ಸತತ ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಗ 7 ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಎನ್‌ಸಿಪಿಯೂ ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಬೆಂಬಲ ಸೂಚಿಸಿದೆ.
ಕೇರಳದಲ್ಲಿ ರಾಜಕೀಯ ವಿರೋಧ ಇರುವ ಕಾಂಗ್ರೆಸ್ ಹಾಗೂ ಸಿಪಿಎಂ ತ್ರಿಪುರದಲ್ಲಿ ಮೈತ್ರಿ ಮಾಡಿಕೊಂಡಿರುವುದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ. ಕೇರಳದಲ್ಲಿ ಕುಸ್ತಿ, ತ್ರಿಪುರದಲ್ಲಿ ದೋಸ್ತಿ ಎಂದು ಕುಟುಕಿದ್ದರು. ಆದರೆ, ಈಗ ಬಿಜೆಪಿ ಹಾಗೂ ಎನ್‌ಸಿಪಿಯು ನಾಗಾಲ್ಯಾಂಡ್‌ನಲ್ಲಿ ಸರ್ಕಾರದ ಭಾಗವಾಗಿವೆ.
ಇದನ್ನೂ ಓದಿ: Nephiu Rio: ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನೆಫಿಯೊ ರಿಯೊ; ಸತತ 5ನೇ ಬಾರಿ ಹುದ್ದೆಗೆ ಏರಿದ ಧುರೀಣ