Site icon Vistara News

Congress President | ಅಧ್ಯಕ್ಷ ರೇಸ್‌ನಿಂದ ಗೆಹ್ಲೋಟ್‌ ಔಟ್‌, ತರೂರ್‌, ಬನ್ಸಾಲ್‌ ಇನ್

Shashi

ನವದೆಹಲಿ: ಪಕ್ಷದ ನಾಯಕತ್ವ ಬಿಕ್ಕಟ್ಟು ಶಮನಕ್ಕಾಗಿ ಕಾಂಗ್ರೆಸ್‌ ನೂತನ ಅಧ್ಯಕ್ಷರನ್ನು (Congress President) ಆಯ್ಕೆ ಮಾಡಲು ಚುನಾವಣೆ ನಡೆಸುವ ಮುನ್ನವೇ ಉಂಟಾದ ಬಿಕ್ಕಟ್ಟು ಬಗೆಹರಿಸುವಲ್ಲಿ ಕಾಂಗ್ರೆಸ್‌ ತಾತ್ಕಾಲಿಕವಾಗಿ ಸಫಲವಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ರೇಸ್‌ನಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಹಾಗೆಯೇ, ಶಶಿ ತರೂರ್‌ ಹಾಗೂ ಪವನ್‌ ಬನ್ಸಾಲ್‌ ಅವರು ನಾಮಪತ್ರಗಳನ್ನು ತೆಗೆದುಕೊಂಡಿದ್ದು, ಇವರಿಬ್ಬರೇ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

“ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಯ ಚುನಾವಣೆ ಕುರಿತ ಎಲ್ಲ ಬೆಳವಣಿಗೆಗಳ ಕುರಿತು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದೇವೆ. ನಿಗದಿತ ವೇಳಾಪಟ್ಟಿಯಂತೆಯೇ ಚುನಾವಣೆ ನಡೆಯಲಿದೆ. ಇದುವರೆಗೆ ಪಕ್ಷದ ನಾಯಕರಾದ ಶಶಿ ತರೂರ್‌ ಹಾಗೂ ಪವನ್‌ ಬನ್ಸಾಲ್‌ ಅವರು ನಾಮಪತ್ರ ತೆಗೆದುಕೊಂಡಿದ್ದಾರೆ” ಎಂದು ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಚೇರ್ಮನ್‌ ಎಂ. ಮಿಸ್ತ್ರಿ ತಿಳಿಸಿದ್ದಾರೆ.

ತರೂರ್‌, ಬನ್ಸಾಲ್‌ಗೇಕೆ ಮಣೆ?

ಹಲವಾರು ವರ್ಷಗಳಿಂದ ಕಾಂಗ್ರೆಸ್‌ನಲ್ಲಿರುವ ಶಶಿ ತರೂರ್‌ ಅವರು ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿದ್ದಾರೆ. ಹೆಚ್ಚು ಓದಿಕೊಂಡಿರುವ, ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವ ತಿರುವನಂತಪುರಂ ಸಂಸದ ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ, ನಾಲ್ಕು ಬಾರಿಯ ಸಂಸದ, ಸದ್ಯ ಕಾಂಗ್ರೆಸ್‌ ಖಜಾಂಚಿಯಾಗಿರುವ, ಪಂಜಾಬ್‌ನ ಪವನ್‌ ಕುಮಾರ್‌ ಬನ್ಸಾಲ್‌ ಅವರ ಅನುಭವ, ರಾಜಕೀಯ ತಂತ್ರಗಾರಿಕೆ ಗುರುತಿಸಿ ಸ್ಪರ್ಧಿಸಲು ನಾಮಪತ್ರ ನೀಡಲಾಗಿದೆ ಎಂದು ತಿಳಿದುಬಂದಿದೆ. ಇಬ್ಬರೂ ಸೆಪ್ಟೆಂಬರ್‌ ೩೦ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುನ್ನಡೆ ಸಾಧಿಸಿದ ಗೆಹ್ಲೋಟ್‌

ರಾಜಸ್ಥಾನ ಬಿಟ್ಟುಕೊಡಲು ಮನಸ್ಸಿಲ್ಲದ ಹಾಗೂ ಸೋನಿಯಾ ಗಾಂಧಿ ಅವರ ಮಾತನ್ನು ತೆಗೆದುಹಾಕಲಾಗದೆ ಒದ್ದಾಡುತ್ತಿದ್ದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಕೊನೆಗೂ ಮುನ್ನಡೆ ಸಾಧಿಸಿದ್ದಾರೆ. ಗೆಹ್ಲೋಟ್‌ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕಿಂತ ಸಿಎಂ ಆಗಿ ಮುಂದುವರಿಯುವುದು ಬೇಕಿತ್ತು. ಹಾಗೊಂದು ವೇಳೆ ಅಧ್ಯಕ್ಷನಾಗಬೇಕು ಎಂದರೆ ಸಿಎಂ ಸ್ಥಾನವೂ ಉಳಿಯಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆದರೆ, ರಾಹುಲ್‌ ಗಾಂಧಿ ಅವರು ಒಬ್ಬರಿಗೆ ಒಂದೇ ಹುದ್ದೆ ಎಂಬ ನಿರ್ಣಯಕ್ಕೆ ನಾವು ಬದ್ಧ ಎಂದು ಹೇಳಿದ ಕಾರಣ ಗೆಹ್ಲೋಟ್‌ ಅವರ “ದ್ವಿಪದವಿ” ಕನಸು ನನಸಾಗಲಿಲ್ಲ. ಆದರೆ, ಕೊನೆಗೂ ಅವರು ಶಾಸಕರ ಬಂಡಾಯದ ಬೆದರಿಕೆಯಿಂದಾಗಿ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿನ್‌ ಪೈಲಟ್‌ ಸುಮ್ಮನಿರುವರೇ?

ಅಶೋಕ್‌ ಗೆಹ್ಲೋಟ್‌ ಅವರು ಕಾಂಗ್ರೆಸ್‌ ಅಧ್ಯಕ್ಷರಾದರೆ, ತಾವು ಮುಖ್ಯಮಂತ್ರಿಯಾಗಬಹುದು ಎಂದು ಕನಸು ಕಾಣುತ್ತಿದ್ದ ಸಚಿನ್‌ ಪೈಲಟ್‌ ಅವರಿಗೆ ಹಿನ್ನಡೆಯಾಗಿದೆ. ಆದರೆ, ಅವರು ಮುಂದಿನ ದಿನಗಳಲ್ಲಿ ಬಂಡಾಯವೇಳುವ ಸಾಧ್ಯತೆಯೂ ಇದೆ. “ಗೆಹ್ಲೋಟ್‌ ಅವರ ಸಿಎಂ ಸ್ಥಾನದ ಮುಂದುವರಿಕೆ ಬಗ್ಗೆ ಸೇರಿ ಯಾವುದೇ ವಿಚಾರಗಳ ಕುರಿತು ಹೈಕಮಾಂಡ್‌ ಜತೆ ಮಾತನಾಡಿಲ್ಲ” ಎಂದು ಸದ್ಯ ಪೈಲಟ್‌ ಹೇಳಿದ್ದಾರೆ. ಆದಾಗ್ಯೂ, ಅವರು ಮುಂದಿನ ದಿನಗಳಲ್ಲಿ ಯಾವ ನಡೆ ಅನುಸರಿಸುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ.

ಇದನ್ನೂ ಓದಿ | Congress President | ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ, ಗೆಹ್ಲೋಟ್‌ ದ್ವಿಪದವಿ ಆಸೆಗೆ ತಣ್ಣೀರೆರಚಿದ ರಾಹುಲ್‌ ಗಾಂಧಿ

Exit mobile version