Site icon Vistara News

Congress Working Committee : ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿ ರೆಬೆಲ್​ಗಳಿಗೆ ಮಣೆ; ಹರಿಪ್ರಸಾದ್​, ಪೈಲೆಟ್​ಗೆ ಸ್ಥಾನ

Congress Leaders

ನವ ದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ (AICC) ಸಭೆಯ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ (Congress Working Committee) 39 ಸದಸ್ಯರನ್ನು ಒಳಗೊಂಡ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಸಮಿತಿಯಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ ಲಭಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ವಿಧಾನ ಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್ ಸ್ಥಾನ ಪಡೆದುಕೊಂಡಿದ್ದಾರೆ. . ಅದೇ ರೀತಿ ಸಮಿತಿಯಲ್ಲಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ಸಿಡಿದೆದ್ದ ಹಲವರಿಗೆ ಸ್ಥಾನ ನೀಡಲಾಗಿದೆ. ಪ್ರಮುಖವಾಗಿ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಬಂಡೆದ್ದಿರವ ಬಿ.ಕೆ ಹರಿಪ್ರಸಾದ್​, ರಾಜಸ್ಥಾನದಲ್ಲಿ ಅಲ್ಲಿನ ಸಿಎಂ ವಿರುದ್ಧ ಸಿಡಿದೆದ್ದಿರುವ ಸಚಿನ್ ಪೈಲೆಟ್​ ಈ ಪಟ್ಟಿಯಲ್ಲಿ ಪ್ರಮುಖರು.

ಕಾಂಗ್ರೆಸ್ ಮುಖಂಡ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸಮಿತಿಯಲ್ಲಿದ್ದಾರೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಸಚಿನ್ ಪೈಲೆಟ್, ದಿಗ್ವಿಜಯ್ ಸಿಂಗ್, ಶಶಿ ತರೂರ್, ಆನಂದ ಶರ್ಮಾ, ಜೈರಾಮ್ ರಮೇಶ್, ಅಧೀರ್ ರಂಜನ್ ಚೌಧರಿ, ಅಭಿಷೇಕ್ ಮನು ಸಿಂಘ್ವಿ ಪಟ್ಟಿಯಲ್ಲಿರುವ ಇತರ ಪ್ರಮುಖ ನಾಯಕರು

ಸಚಿನ್​, ತರೂರ್​ಗೆ ಸ್ಥಾನ

ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ ರಾಜಸ್ಥಾನದ ನಾಯಕ ಸಚಿನ್ ಪೈಲಟ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಅವರು ಅಶೋಕ್ ಗೆಹ್ಲೋಟ್ ನೇತೃತ್ವದ ತಮ್ಮದೇ ಪಕ್ಷದ ಸರ್ಕಾರವನ್ನು ಬಹಿರಂಗವಾಗಿ ಮುಜುಗರಕ್ಕೀಡು ಮಾಡಿದ್ದರು. ಹೀಗಾಗಿ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿಯಾಗಿರುವ ಅವರನ್ನು ಸಮಧಾನ ಪಡಿಸಲು ಅವರಿಗೆ ಉನ್ನತ ಸ್ಥಾನ ನೀಡಲಾಗಿದೆ.

ಇನ್ನೊಂದೆಡೆ ಸಂಸದ ಶಶಿ ತರೂರ್ (ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿದ್ದರು). ಇದೀಗ ಅವರಿಗೂ ಕಾರ್ಯಕಾರಿ ಸಮಿತಿಯಲ್ಲಿ ಅವಕಾಶ ಲಭಿಸಿದೆ ದೀಪ್​ ದಾಸ್ ಮುನ್ಷಿ ಮತ್ತು ಸೈಯದ್ ನಾಸಿರ್ ಹುಸೇನ್ ಸಿಡಬ್ಲ್ಯೂಸಿಗೆ ಹೊಸದಾಗಿ ಪ್ರವೇಶ ಪಡೆದುಕೊಂಡವರು.

ದಾಸ್ ಮುನ್ಷಿ ಪಶ್ಚಿಮ ಬಂಗಾಳದ ಮಾಜಿ ಸಂಸದೆ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಪ್ರಿಯರಂಜನ್ ದಾಸ್ ಮುನ್ಷಿ ಅವರ ಪತ್ನಿ. ಹುಸೇನ್ ರಾಜ್ಯಸಭಾ ಸದಸ್ಯರಾಗಿದ್ದು, ಈ ಹಿಂದೆ ಕಾಂಗ್ರೆಸ್​ನ ರಾಷ್ಟ್ರೀಯ ಮಾಧ್ಯಮ ಪ್ಯಾನೆಲಿಸ್ಟ್ ಆಗಿ ಸೇವೆ ಸಲ್ಲಿಸಿದ್ದರು.

ತರೂರ್ ಅವರಲ್ಲದೆ, 2020ರಲ್ಲಿ ಪಕ್ಷದಲ್ಲಿ ಸುಧಾರಣೆಗಳನ್ನು ಕೋರಿ ಜಿ -23 ಗುಂಪು ಬರೆದ ಪತ್ರಕ್ಕೆ ಸಹಿ ಹಾಕಿದ ಮತ್ತೊಬ್ಬ ವ್ಯಕ್ತಿ ಆನಂದ್ ಶರ್ಮಾ ಅವರು ಪಕ್ಷದ ಉನ್ನತ ಸಂಸ್ಥೆಯಲ್ಲಿ ಸ್ಥಾನ ಪಡೆದಿದ್ದಾರೆ.

ತಮ್ಮ ಆಯ್ಕೆ ಬಗ್ಗೆ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಪಕ್ಷದ ಅಧ್ಯಕ್ಷರ ನಿರ್ಧಾರ “ಗೌರವ” ಎಂದು ಶಶಿ ತರೂರ್ ಎಕ್ಸ್ ಪೋಸ್ಟ್ ಮಾಡಿದ್ದಾರೆ. “ಈ ಸಂಘಟನೆಯ ಭಾಗವಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.

ಹಿರಿಯರಿಗೆ ಮಣೆ

ಈ ವರ್ಷದ ಆರಂಭದಲ್ಲಿ, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರು ಪಕ್ಷದ ಅರ್ಧದಷ್ಟು ಪದಾಧಿಕಾರಿಗಳು 50ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂದು ಹೇಳಿದ್ದರು. ಒಟ್ಟು 39 ಸಿಡಬ್ಲ್ಯುಸಿ ಸದಸ್ಯರಲ್ಲಿ ಕೇವಲ ಮೂವರು ಮಾತ್ರ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು – ಸಚಿನ್ ಪೈಲಟ್, ಗೌರವ್ ಗೊಗೊಯ್ ಮತ್ತು ಕಮಲೇಶ್ವರ್ ಪಟೇಲ್.

ಇದನ್ನೂ ಓದಿ : Rahul Gandhi: ಲಡಾಕ್‌ನಲ್ಲಿ ರಾಹುಲ್‌ ಗಾಂಧಿ ಬೈಕ್‌ ರೈಡ್‌, ಕ್ರಿಶ್‌ನಂತೆ ಬೈಕ್‌ ಓಡಿಸಿದ ಕಾಂಗ್ರೆಸ್‌ ನಾಯಕ

ಉತ್ತರ ಪ್ರದೇಶದ ಉಸ್ತುವಾರಿಯಾಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಯಾವುದೇ ರಾಜ್ಯದ ಉಸ್ತುವಾರಿಯನ್ನಾಗಿ ಮಾಡುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

ಸದಸ್ಯರನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಮನಿರ್ದೇಶನ ಮಾಡಿದ್ದಾರೆ. ಯಾರನ್ನೂ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿಲ್ಲ. ಎಲ್ಲಾ ಸಿಡಬ್ಲ್ಯೂಸಿ ಸದಸ್ಯರನ್ನು ನಾಮನಿರ್ದೇಶನ ಮಾಡಲು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್​​ನ ಕಮಿಟಿ ಫೆಬ್ರವರಿಯಲ್ಲಿ ಹೇಳಿತ್ತು.

Exit mobile version