ನವದೆಹಲಿ: ಹಲವು ದಶಕಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷರಾಗಿ ಗಾಂಧಿ ಕುಟುಂಬದ ಹೊರತಾದ ನಾಯಕರು ಆಯ್ಕೆಯಾಗಲು ಕಾಲ ಸನ್ನಿಹಿತವಾಗಿದೆ. ಶಶಿ ತರೂರ್ (Shashi Tharoor) ಅವರನ್ನೇ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದ ಸೋನಿಯಾ ಗಾಂಧಿ ಅವರನ್ನು ಶಶಿ ತರೂರ್ ಭೇಟಿಯಾಗಲು ತೆರಳಿದ್ದಾಗ, ನೀವೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂಬುದಾಗಿ ಸೋನಿಯಾ ಗಾಂಧಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಮುಂದಿನ ತಿಂಗಳು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಶಶಿ ತರೂರ್ ಅವರೇ ಅಧ್ಯಕ್ಷರಾಗುವುದು ಖಚಿತ ಎನ್ನಲಾಗುತ್ತಿದೆ.
ಶಶಿ ತರೂರ್ ಏಕೆ?
ಅಧಿಕಾರದ ದೃಷ್ಟಿಯಿಂದ ಕಾಂಗ್ರೆಸ್‌ನ ಪರಿಸ್ಥಿತಿ ದೇಶಾದ್ಯಂತ ಹೀನವಾಗಿದೆ. ಹಾಗಾಗಿ, ರಾಹುಲ್ ಗಾಂಧಿ ಅವರು ಅಧ್ಯಕ್ಷ ಗಾದಿಗೇರಲು ಸುತಾರಾಂ ಒಪ್ಪುತ್ತಿಲ್ಲ. ಅದರಲ್ಲೂ, ರಾಹುಲ್ ಗಾಂಧಿಯವರನ್ನೇ ಆಯ್ಕೆ ಮಾಡಿದರೆ, ಪಕ್ಷದಲ್ಲಿಯೇ ಭಿನ್ನಮತ ಹೆಚ್ಚಾಗಲಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆಪ್ತ ಶಶಿ ತರೂರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಸೋನಿಯಾ ಗಾಂಧಿ ಅವರ ಇಂಗಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಶಶಿ ತರೂರ್ ಅವರು ಕಾಂಗ್ರೆಸ್‌ಗೆ ನಿಷ್ಠರಾಗಿದ್ದಾರೆ. ಮೇಲಾಗಿ ಸೋನಿಯಾ ಗಾಂಧಿ ಆಪ್ತರಾಗಿದ್ದಾರೆ. ಉದಾತ್ತ ಚಿಂತನೆಗಳೂ ಅವರಲ್ಲಿರುವುದರಿಂದ ಹಾಗೂ ಯುವಕರನ್ನು ಮುನ್ನಡೆಸುವ ಸಾಮರ್ಥ್ಯ ಇರುವುದರಿಂದ ಅವರಿಗೆ ಸೋನಿಯಾ ಗಾಂಧಿ ಮಣೆ ಹಾಕಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಕ್ಟೋಬರ್ ೧೭ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ | ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗ್ತೀರಾ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ ರಾಹುಲ್ ಗಾಂಧಿ