ನವ ದೆಹಲಿ: ದಿಲ್ಲಿಯ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ (Congress President) ಚುನಾವಣೆಯ ಮತ ಎಣಿಕೆಯು ಆರಂಭವಾಗಿದೆ. ಏತನ್ಮಧ್ಯೆ, ಶಶಿ ತರೂರ್ ಅವರು ಚುನಾವಣಾ ಏಜೆಂಟ್ ಅವರು, ಚುನಾವಣೆ ವೇಳೆ ಅಕ್ರಮ ನಡೆದಿದೆ ಎಂದು ದೂರಿದ್ದಾರೆ. ಈಗ ಶಶಿ ತರೂರ್ ಪಾಳೆಯ ಮಾಡಿರುವ ಆರೋಪದಿಂದ ಗೊಂದಲ ಏರ್ಪಟ್ಟಿದೆ. ಈ ಬಗ್ಗೆ ಅವರು ಚುನಾವಣಾ ಕಮಿಟಿಗೆ ದೂರು ಕೂಡ ನೀಡಿದ್ದಾರೆ. ಮತ್ತೊಂದೆಡೆ, ಮತ ಎಣಿಕೆಯಲ್ಲಿ ಖರ್ಗೆ 4000 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದರೆ, ತರೂರ್ ಈವರೆಗೆ 500 ಮತಗಳನ್ನು ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷ ಚುನಾವಣೆಗೆ ಮತದಾನ ನಡೆದಿತ್ತು. ಶೇ.95ರಷ್ಟು ಮತದಾನವಾಗಿದೆ. ನಿಗದಿಯಂತೆ ಅಕ್ಟೋಬರ್ 19ರಂದು ಮತ ಎಣಿಕೆ ನಡೆಯುತ್ತಿದ್ದು, ಶೀಘ್ರವೇ ಫಲಿತಾಂಶವೂ ಹೊರಬೀಳುವ ಸಾಧ್ಯತೆ ಇದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ತಿರುವನಂತಪುರ ಸಂಸದ ಶಶಿ ತರೂರ್ ಅವರು ಸ್ಪರ್ಧಿಸಿದ್ದಾರೆ.
ದಿಲ್ಲಿಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಶಶಿ ತರೂರ್ ಪಾಳಯವು ಈ ಗಂಭೀರ ಆರೋಪ ಮಾಡಿದೆ. ಉತ್ತರ ಪ್ರದೇಶದಲ್ಲಿ ನಡೆದ ಮತದಾನದಲ್ಲಿ ಅಕ್ರಮ ನಡೆದಿರುವ ಸಾಧ್ಯತೆಗಳಿವೆ. ಹಾಗಾಗಿ, ಈ ಎಣಿಕೆಗೆ ಉತ್ತರ ಪ್ರದೇಶದ ಮತಗಳನ್ನು ಪರಿಗಣಿಸಬಾರದು ಎಂದು ಕೇಳಿಕೊಂಡಿದೆ.
ಈ ಸಂಬಂಧ ಮಧುಸೂದನ್ ಮಿಸ್ತ್ರಿ ಅವರ ಜತೆ ಸಂಪರ್ಕದಲ್ಲಿದ್ದು, ಅನೇಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಶಶಿ ತರೂರ್ ಅವರ ಚುನಾವಣಾ ಏಜೆಂಟ್ ಆಗಿದ್ದ ಸಲ್ಮಾನ್ ಸೋಜ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Congress President | ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ 96% ಮತದಾನ, ಮತ ಹಾಕಿದ ಗಣ್ಯರ ಫೋಟೊ ಇಲ್ಲಿವೆ