Site icon Vistara News

Shehla Rashid: ಮೋದಿಯನ್ನು ಹಾಡಿ ಹೊಗಳಿದ ಶೆಹ್ಲಾ ರಶೀದ್; ಒಂದು ಕಾಲದ ಕಟ್ಟರ್‌ ವಿರೋಧಿ ಇವರು!

Shehla Rashid On Narendra Modi

PM Narendra Modi a selfless man, works in national interest: Ex-JNU student Shehla Rashid‌

ನವದೆಹಲಿ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಕಾಳಗವು (Israel Palestine War) ದಿನೇದಿನೆ ಮಾರಣಾಂತಿಕವಾಗುತ್ತಿದೆ. ಉಗ್ರರು ಹಾಗೂ ಇಸ್ರೇಲ್‌ ರಾಕೆಟ್‌ ದಾಳಿಗೆ ಸಾವಿರಾರು ಜನ ಬಲಿಯಾಗಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇಂತಹ ರಣಭೀಕರ ದಾಳಿಯಿಂದಾಗಿ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಉಲ್ಬಣಗೊಳ್ಳುತ್ತಿರುವ ಹಿಂಸಾಚಾರದ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ, ಮಧ್ಯಪ್ರಾಚ್ಯದ ಹಿಂಸಾಚಾರ, ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ವಿಷಯಕ್ಕೆ ಸಂಬಂಧಿಸಿದಂತೆ ಜೆಎನ್‌ಯು ಮಾಜಿ ವಿದ್ಯಾರ್ಥಿ, ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್‌ (Shehla Rashid) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹಾಡಿ ಹೊಗಳಿದ್ದಾರೆ.

“ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಪರಿಸ್ಥಿತಿಗಳು, ಇತ್ತೀಚಿನ ಸನ್ನಿವೇಶಗಳನ್ನು ಗಮನಿಸಿದರೆ, ನಾವು ಭಾರತೀಯರಾಗಿ ಹುಟ್ಟಿ ಎಷ್ಟು ಪುಣ್ಯ ಮಾಡಿದ್ದೇವೆ ಎಂದು ಅನಿಸುತ್ತಿದೆ. ಭಾರತದ ಸುರಕ್ಷತೆಗೆ ದೇಶದ ಸೈನಿಕರು, ಭದ್ರತಾ ಸಿಬ್ಬಂದಿಯು ಎಷ್ಟು ಶ್ರಮಿಸುತ್ತಾರೆ ಎಂಬುದು ತಿಳಿಯುತ್ತದೆ. ಅದರಲ್ಲೂ, ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಎಡಿಜಿಪಿ ಮನೋಜ್‌ ಸಿನ್ಹಾ ಅವರಿಗೆ ಸಲ್ಲಬೇಕು” ಎಂದು ಶೆಹ್ಲಾ ರಶೀದ್‌ ಹೇಳಿದ್ದಾರೆ.

“ಭದ್ರತೆಯೇ ಇಲ್ಲದೆ ಶಾಂತಿಸ್ಥಾಪನೆಯು ಅಸಾಧ್ಯ. ಮಧ್ಯಪ್ರಾಚ್ಯದ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ, ಭಾರತದ ಚಿನಾರ್‌ ಕಾರ್ಪ್ಸ್‌, ಸಿಆರ್‌ಪಿಎಫ್‌, ಜಮ್ಮು-ಕಾಶ್ಮೀರ ಪೊಲೀಸರು ಜಮ್ಮು-ಕಾಶ್ಮೀರದಲ್ಲಿ ಭಾರಿ ಭದ್ರತೆ ಒದಗಿಸುವ ಮೂಲಕ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಅವರ ಶ್ರಮದಿಂದ ಇದೆಲ್ಲ ಸಾಧ್ಯವಾಗಿದೆ” ಎಂದು ಶೆಹ್ಲಾ ರಶೀದ್‌ ಟ್ವೀಟ್‌ ಮಾಡಿದ್ದಾರೆ. ಇಸ್ರೇಲ್‌ ಹಾಗೂ ಗಾಜಾ ಪಟ್ಟಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸುವಾಗ ಶೆಹ್ಲಾ ರಶೀದ್‌ ಅವರು ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಈಗ ಗೀತ ರಚನೆಕಾರ; ಪ್ರಧಾನಿ ವಿರಚಿತ ಗರ್ಬಾ ಹಾಡನ್ನು ನೀವೂ ಕೇಳಿ!

ಒಂದು ಕಾಲದಲ್ಲಿ ಮೋದಿಯ ಕಟ್ಟರ್‌ ವಿರೋಧಿ

ಶೆಹ್ಲಾ ರಶೀದ್‌ ಅವರು ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟರ್‌ ವಿರೋಧಿಯಾಗಿದ್ದರು. 2016ರಲ್ಲಿ ಜೆಎನ್‌ಯು ವಿವಿಯಲ್ಲಿ ‘ಟುಕ್ಡೆ ಟುಕ್ಡೆ ಗ್ಯಾಂಗ್’‌ ಘಟನೆ ನಡೆದ ಬಳಿಕ ಶೆಹ್ಲಾ ರಶೀದ್‌ ಚರ್ಚೆಯ ಮುನ್ನೆಲೆಗೆ ಬಂದರು. ಅಲ್ಲದೆ, 2019ರಲ್ಲಿ “ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯು ಭಯ ಹುಟ್ಟಿಸುತ್ತಿವೆ” ಎಂಬುದಾಗಿ ಟ್ವೀಟ್‌ ಮಾಡಿದ ಕಾರಣ ಅವರ ವಿರುದ್ಧ ಕೇಸ್‌ ದಾಖಲಿಸಲಾಗಿತ್ತು. ಆದರೆ, ಇದೇ ಶೆಹ್ಲಾ ರಶೀದ್‌ ಅವರು 370ನೇ ವಿಧಿ ರದ್ದು ತೀರ್ಮಾನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದರು. “ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಸುಧಾರಣೆಯಾಗುತ್ತಿದೆ” ಎಂದು ವಿಧಿ ರದ್ದು ತೀರ್ಮಾನವನ್ನು ಬೆಂಬಲಿಸಿದ್ದರು.

Exit mobile version