ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಂದಿನವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸುವ ನಿರೀಕ್ಷೆ ಇದೆ. ಮಂಗಳವಾರ ಮತ್ತು ಗುರುವಾರದ ನಡುವೆ ಸಂಪುಟ ವಿಸ್ತರಣೆಯಾಗಲಿದೆ. ೧೩ ಸಚಿವರು ಸೇರ್ಪಡೆಯಾಗುವ ಸಾಧ್ಯತೆ ಇದೆ.
ಬಿಜೆಪಿಯಿಂದ ೮ ಹಾಗೂ ಶಿಂಧೆ ಬಣದಿಂದ ಐವರು ಸಚಿವರಾಗುವ ನಿರೀಕ್ಷೆ ಇದೆ. ಮಂಗಳವಾರ ಮತ್ತು ಗುರುವಾರ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ, ಎರಡನೇ ಹಂತದ ವಿಸ್ತರಣೆಯು ಅಸೆಂಬ್ಲಿಯ ಮುಂಗಾರು ಅಧಿವೇಶನ ಮುಕ್ತಾಯದ ನಂತರ ನಡೆಯುವ ಸಾಧ್ಯತೆ ಇದೆ.
ಶಿಂಧೆ ಹಾಗೂ ಫಡ್ನವಿಸ್ ಅವರು ದಿಲ್ಲಿಯಲ್ಲಿ ಶನಿವಾರ ಪಕ್ಷದ ಹೈಕಮಾಂಡ್ ಜತೆ ಸಮಾಲೋಚನೆ ನಡೆಸಿದ್ದರು. ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಫಡ್ನವಿಸ್, ಜುಲೈ ೧೮ರ ರಾಷ್ಟ್ರಪತಿ ಚುನಾವಣೆಗೆ ಮುನ್ನ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದಿದ್ದರು. ಈಗ ಸಂಪುಟದಲ್ಲಿ ಸಿಎಂ ಶಿಂಧೆ ಮತ್ತು ಡಿಸಿಎಂ ಫಡ್ನವಿಸ್ ಮಾತ್ರ ಇದ್ದಾರೆ.