ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶಿವಸೇನಾ ಪಕ್ಷದ ನೂತನ ಕಾರ್ಯಕಾರಿಣಿಯನ್ನು ರಚಿಸಿದ್ದಾರೆ. ಹಾಗೂ ಇದರ ಮುಖ್ಯ ನೇತಾ (ಪ್ರಮುಖ ನಾಯಕ) ಆಗಿ ಸ್ವತಃ ಶಿಂಧೆ ಅವರೇ ನೇಮಕವಾಗಿದ್ದಾರೆ.
ಶಿವಸೇನಾದ ಅಧ್ಯಕ್ಷರಾಗಿ ಉದ್ಧವ್ ಠಾಕ್ರೆ ಅವರನ್ನು ಮುಂದುವರಿಸಲಾಗಿದೆ. ಆದರೆ ನೆಪಮಾತ್ರಕ್ಕೆ ಉದ್ಧವ್ ಠಾಕ್ರೆ ಅಧ್ಯಕ್ಷರಾಗಿದ್ದು, ಶಿಂಧೆ ಅವರಿಗೆ ಬಹುಪಾಲು ಶಾಸಕರು, ಸಂಸದರ ಬೆಂಬಲ ಲಭಿಸಿದೆ. ಮತ್ತೊಂದು ಕಡೆ ಈ ಹೊಸ ವ್ಯವಸ್ಥೆಯನ್ನು ಉದ್ಧವ್ ಠಾಕ್ರೆ ತಿರಸ್ಕರಿಸಿದ್ದು, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಶಿಂಧೆ ಅವರನ್ನು ವಜಾಗೊಳಿಸಿದ್ದಾರೆ.
ಶಿವಸೇನಾ ಪಕ್ಷದ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ (ಜುಲೈ ೨೦) ನಡೆಸಲಿದೆ. ಸುಪ್ರೀಂಕೋರ್ಟ್ ವಿಚಾರಣೆಗೆ ಮುನ್ನ ಶಿಂಧೆ ಅವರು ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ಮಹತ್ವ ಗಳಿಸಿದೆ. ಜತೆಗೆ ಶಿವಸೇನಾದ ೧೯ ಸಂಸದರ ಪೈಕಿ ೧೨ ಸಂಸದರು ರಾಷ್ಟ್ರೀಯ ಕಾರ್ಯಕಾರಿಣಿಯನ್ನು ವಿಸರ್ಜಿಸಿ ಪುನಾರಚಿಸಲು ಬೆಂಬಲಿಸಿದ್ದರು.
“ಉದ್ಧವ್ ಠಾಕ್ರೆ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಆದರೆ ಶಿಂಧೆ ಮುಖ್ಯ ನೇತಾ ಆಗಿರಲಿದ್ದಾರೆʼʼ ಎಂದು ಶಿವಸೇನಾದ ಶಿಂಧೆ ಬಣದ ಸಂಸದರು ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ಅವರನ್ನು ಅಧ್ಯಕ್ಷರಾಗಿ ಉಳಿಸಿದ್ದೇಕೆ?
ಶಿವಸೇನಾದ ಶಿಂಧೆ ಬಣ ರಚಿಸಿರುವ ನೂತನ ಕಾರ್ಯಕಾರಿಣಿಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಅಧ್ಯಕ್ಷರಾಗಿ ಮುಂದುವರಿಸಿದ್ದೇಕೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ. ನಿಜವಾದ ಶಿವಸೇನೆ ಯಾರದ್ದು ಎಂಬುದರ ಬಗ್ಗೆ ಕಾನೂನು ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಉದ್ಧವ್ ಠಾಕ್ರೆ ಅವರನ್ನು ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ.
ಶಿವಸೇನಾದಲ್ಲಿ ಶಿಂಧೆ ಬಣದ ಪ್ರಾಬಲ್ಯವನ್ನು ಸೂಚಿಸಲು ಹಾಗೂ ಪಕ್ಷದ ವಿಭಜನೆ ಆಗಿಲ್ಲ ಎಂಬುದನ್ನು ಬಿಂಬಿಸಲು ಉದ್ಧವ್ ಠಾಕ್ರೆ ಅವರನ್ನು ಅಧ್ಯಕ್ಷರಾಗಿ ಕಾರ್ಯಕಾರಿಣಿಯಲ್ಲಿ ಶಿಂಧೆ ಬಣ ಮುಂದುವರಿಸಿದೆ. ಪಕ್ಷಾಂತರ ವಿರೋಧಿ ಕಾಯಿದೆ ಹಿನ್ನೆಲೆಯಲ್ಲಿ ತಮ್ಮದೇ ನಿಜವಾದ ಶಿವಸೇನೆ ಎಂದು ಬಿಂಬಿಸುವುದು ಶಿಂಧೆ ಬಣಕ್ಕೆ ಮಹತ್ವದ್ದಾಗಿದೆ. ಬೇರೆ ಪಕ್ಷದ ಜತೆ ವಿಲೀನಕ್ಕೆ ಶಿಂಧೆ ಬಣದ ಶಾಸಕರು ಒಪ್ಪುತ್ತಿಲ್ಲ.
ಮತ್ತೊಂದು ಕಡೆ ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್‌ನಲ್ಲಿ ತಮ್ಮದೇ ನಿಜವಾದ ಶಿವಸೇನೆ ಎಂಬುದು ಸಾಬೀತಾಗುವ ವಿಶ್ವಾಸವನ್ನು ಹೊಂದಿದೆ.