Site icon Vistara News

Rajya Sabha Election: ರಾಜ್ಯಸಭೆ ಚುನಾವಣೆಗೆ ಮಿಲಿಂದ್ ದಿಯೋರಾರನ್ನು ಕಣಕ್ಕಿಳಿಸಿದ ಶಿಂಧೆ ಶಿವಸೇನೆ

Shinde Shiv Sena fielded Milind Deora for the Rajya Sabha elections

ಮುಂಬೈ: ಇತ್ತೀಚೆಗೆಷ್ಟೇ ಕಾಂಗ್ರೆಸ್ ತೊರೆದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra CM Eknath Shinde) ನೇತ್ವದ ಶಿವಸೇನೆ (Shiv Sena) ಪಕ್ಷಕ್ಕೆ ಸೇರ್ಪಡೆಯಾದ ಮಿಲಿಂದ್ ದಿಯೋರಾ (Milind Deora) ಅವರಿಗೆ ರಾಜ್ಯಸಭಾ ಚುನಾವಣಾ ಕಣಕ್ಕಿಳಿಸಲಾಗುತ್ತಿದೆ(Rajya Sabha Election). ಮಿಲಿಂದ್ ಅವರು ನಾಳೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಮುಂಬೈ ಮೂಲದ ರಾಜಕಾರಣಿ ಮತ್ತು ಕಾಂಗ್ರೆಸ್ ಹಿರಿಯ ದಿವಂಗತ ಮುರಳಿ ದೇವೋರಾ ಅವರ ಪುತ್ರ ಮಿಲಿಂದ್ ದಿಯೋರಾ ಅವರು ಶಿವಸೇನೆಗೆ ಬದಲಾಯಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಸೈದ್ಧಾಂತಿಕ ಮತ್ತು ಸಾಂಸ್ಥಿಕ ಬೇರುಗಳಿಂದ ವಿಮುಖವಾಗಿದೆ, ಜಾತಿ ವಿಭಜನೆಗಳನ್ನು “ಪೋಷಣೆ” ಮತ್ತು ವ್ಯಾಪಾರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದರು.

1968 ರಲ್ಲಿ ನನ್ನ ತಂದೆ ಸೇರಿದಾಗ ಅಥವಾ 2004 ರಲ್ಲಿ ನಾನು ಸೇರಿದಾಗ ಇದ್ದ ಕಾಂಗ್ರೆಸ್ ಹೀಗಿರಲಿಲ್ಲ. 30 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಆರ್ಥಿಕ ಸುಧಾರಣೆಗಳನ್ನು ತಂದ ಪಕ್ಷವು ಅದೇ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ನಿಂದಿಸುತ್ತಿದೆ. ಇದು ಅವರನ್ನು ದೇಶವಿರೋಧಿ ಎಂದು ಕರೆಯುತ್ತದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾಡಿದ ಎಲ್ಲ ಕೆಲಸವನ್ನೂ ಟೀಕಿಸುತ್ತಿದೆ ಎಂದು ಹೇಳಿದ್ದರು.

ತಮ್ಮ ಪಕ್ಷಾಂತರಕ್ಕೆ ಕಾಂಗ್ರೆಸ್ ಪಕ್ಷವನ್ನು ಮಿಲಿಂದ್ ದಿಯೋರಾ ಅವರು ಎಷ್ಟೇ ನಿಂದಿಸಿದರೂ, ಅವರ ಕೈಗೊಂಡ ನಿರ್ಧಾರ ಹಿಂದೆ ಬೇರೆಯದ್ದೇ ಕಾರಣಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮಿಲಿಂದ್ ದಿಯೋರಾ ಪ್ರತಿನಿಧಿಸುತ್ತಿದ್ದ ದಕ್ಷಿಣ ಮುಂಬೈ ಲೋಕಸಭೆ ಕ್ಷೇತ್ರವು ಮೈತ್ರಿ ಪಕ್ಷವಾದ ಉದ್ಧವ ಠಾಕ್ರೆ ಬಣದ ಶಿವಸೇನೆ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಕಾರಣಕ್ಕಾಗಿ ಮಿಲಿಂದ್ ದಿಯೋರಾ ಅವರು ಪಕ್ಷಾಂತರ ಮಾಡಿದ್ದಾರೆ.

ದಿಯೋರಾ ಅವರು ಮುಂಬೈ ದಕ್ಷಿಣದಿಂದ 2004 ಮತ್ತು 2009 ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು. ಆದರೆ 2014 ಮತ್ತು 2019 ರಲ್ಲಿ ಸತತ ಸಾರ್ವತ್ರಿಕ ಚುನಾವಣೆಗಳಲ್ಲಿ ಶಿವಸೇನಾ (ಅವಿಭಜಿತ) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರವಿಂದ್ ಸಾವಂತ್ ಅವರ ಎದುರು ಸೋಲು ಕಂಡಿದ್ದರು.

ಈ ಸುದ್ದಿಯನ್ನೂ ಓದಿ: Rajya Sabha Election: ಜೆ.ಪಿ.ನಡ್ಡಾ, ಅಶೋಕ್‌ ಚೌಹಾಣ್‌ಗೆ ರಾಜ್ಯಸಭೆ ಬಿಜೆಪಿ ಟಿಕೆಟ್ ಘೋಷಣೆ

Exit mobile version