Site icon Vistara News

ಶಿವಸೇನಾ ಬಾಳಾ ಸಾಹೇಬ್‌ ಎಂದು ಹೆಸರು ಇಟ್ಟುಕೊಂಡ ಶಿಂಧೆ ಬಣ, ಯಾವುದೇ ಪಕ್ಷದ ಜತೆ ವಿಲೀನ ಆಗಲ್ಲ

Shindhe Camp

ಗುವಾಹಟಿ: ಶಿವಸೇನೆಯಿಂದ ಬಂಡಾಯವೆದ್ದಿರುವ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಮ್ಮ ಗುಂಪಿಗೆ ಶಿವಸೇನಾ ಬಾಳಾಸಾಹೇಬ್‌ ಎಂಬ ಹೆಸರು ಇಟ್ಟುಕೊಂಡಿದ್ದಾರೆ. ಈ ಗುಂಪು ಯಾವುದೇ ಪಕ್ಷದೊಂದಿಗೆ ವಿಲೀನವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಗುವಾಹಟಿಯ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ತಂಗಿರುವ ೪೦ಕ್ಕೂ ಅಧಿಕ ಶಾಸಕರು ತಮ್ಮ ಬಣವನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ನಿರ್ಧರಿಸಿದ್ದು ಇದಕ್ಕೆ ಶಿವಸೇನಾ ಬಾಳಾಸಾಹೇಬ್‌ ಎಂದು ಹೆಸರಿಡಲು ನಿರ್ಧರಿಸಿದ್ದಾರೆ. ಉದ್ಧವ್‌ ಠಾಕ್ರೆ ಅವರ ನೇತೃತ್ವದಲ್ಲಿ ಪಕ್ಷವು ಬಾಳಾ ಸಾಹೇಬ್‌ ಅವರ ಮೂಲ ತತ್ವವಾದ ಹಿಂದುತ್ವದಿಂದ ದೂರ ಸರಿದಿದೆ ಎಂದು ಬಂಡಾಯ ನಾಯಕ ಶಿಂಧೆ ಘೋಷಿಸಿದ್ದರು. ತಾವು ಬಾಳ್‌ ಠಾಕ್ರೆ ಅವರ ಸಿದ್ಧಾಂತಗಳಿಗೆ ಬದ್ಧವಾಗಿರುವುದಾಗಿ ಪ್ರಕಟಿಸಿದ್ದ ಅವರು ಇದೀಗ ಅದೇ ಹೆಸರನ್ನು ಇಟ್ಟುಕೊಂಡಿದ್ದಾರೆ.

ಏಕನಾಥ ಶಿಂಧೆ ಅವರ ಈ ನಿರ್ಧಾರದೊಂದಿಗೆ ಶಿವಸೇನೆಯು ಶಿವಸೇನಾ ಬಾಳಾ ಸಾಹೇಬ್‌ ಮತ್ತು ಶಿವಸೇನಾ ಉದ್ಧವ್‌ ಎಂದು ಎರಡು ಬಣಗಳಾಗಿ ವಿಭಜನೆ ಆದಂತಾಗಿದೆ. ಏಕನಾಥ್‌ ಶಿಂಧೆ ಬಣದಲ್ಲಿ ಈಗ ೪೦ ಶಿವಸೇನಾ ಶಾಸಕರಿದ್ದಾರೆ ಎಂದು ಹೇಳಲಾಗಿದ್ದರೆ, ಅತ್ತ ಉದ್ಧವ್‌ ಠಾಕ್ರೆ ಬಣದಲ್ಲಿ ೧೬ ಶಾಸಕರಿರುವ ಸಾಧ್ಯತೆ ಇದೆ. ೧೯ ಮಂದಿ ಶಿವಸೇನಾ ಸಂಸದರ ಪೈಕಿ ೧೪ ಮಂದಿ ಶಿಂಧೆ ಬಣದಲ್ಲಿರುವುದಾಗಿ ಹೇಳಲಾಗುತ್ತಿದೆ.

ವಿಲೀನವಿಲ್ಲ ಎಂದ ಶಿಂಧೆ
ಹೊಸ ಗುಂಪನ್ನು ರಾಜಕೀಯ ಪಕ್ಷವಾಗಿ ಘೋಷಿಸುತ್ತಾರೋ ಅಥವಾ ವಿಧಾನಸಭೆಯಲ್ಲಿ ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳಲು ಈ ರೀತಿ ಗುಂಪು ರಚಿಸಿದ್ದಾರೆಯೋ ಎನ್ನುವುದು ಸ್ಪಷ್ಟವಾಗಿಲ್ಲ. ಇದನ್ನೇ ರಾಜಕೀಯ ಪಕ್ಷವಾಗಿ ಬೆಳೆಸುವ ಉದ್ದೇಶವಿದ್ದರೆ ಶಿವಸೇನೆ ಮತ್ತು ಅದರ ಚಿಹ್ನೆಯಾಗಿರುವ ಬಿಲ್ಲು ಬಾಣದ ಬಗ್ಗೆ ಶಿಂಧೆ ಬಣ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ಭಾವಿಸಬಹುದಾಗಿದೆ.

ಪ್ರತ್ಯೇಕ ಬಣಕ್ಕೆ ಮಾನ್ಯತೆ ಸಿಗುವುದೇ?
ರಾಜ್ಯದಲ್ಲಿ ಹೊಸ ಸರಕಾರ ರಚನೆ ನಿಟ್ಟಿನಲ್ಲಿ ಶಿಂಧೆ ಬಣ ಹೊಸ ಬಣವನ್ನು ರಚಿಸಿಕೊಂಡಿದೆ ಎಂದು ಹೇಳಲಾಗಿದೆಯಾದರೂ ಇದಕ್ಕೆ ಮಾನ್ಯತೆ ದೊರೆಯುವುದೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಒಂದು ಕಡೆ ಮೂರನೇ ಎರಡು ಪ್ರಮಾಣದ ಶಾಸಕರು ಒಂದು ಗುಂಪಾಗಿ ಗುರುತಿಸಿಕೊಂಡರೆ ಮಾನ್ಯತೆ ದೊರೆಯುತ್ತದೆ ಎಂದು ಹೇಳಲಾಗಿದೆಯಾದರೂ ಈ ಬಣ ಯಾವುದಾದರೂ ಪಕ್ಷದೊಂದಿಗೆ ವಿಲೀನವಾದರೆ ಮಾತ್ರ ಶಾಸಕರು ತಮ್ಮ ಶಾಸಕತ್ವ ಉಳಿಸಿಕೊಳ್ಳುತ್ತಾರೆ ಎನ್ನುವ ಇನ್ನೊಂದು ವಾದವಿದೆ. ಇಂಥ ಸಂದರ್ಭ ಬಂದರೆ ಈ ಬಣ ಬಿಜೆಪಿ ಜತೆ ವಿಲೀನವಾಗಬೇಕಾಗುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಪಕ್ಷದೊಂದಿಗೆ ವಿಲೀನ ಆಗುವುದಿಲ್ಲ ಎಂದು ಶಿಂಧೆ ಹೇಳಿದ್ದಾರೆ. ಹೀಗಾಗಿ ಮುಂದಿನ ಬೆಳವಣಿಗೆಗಳ ಬಗ್ಗೆ ಕಾದು ನೋಡಬೇಕಾಗಿದೆ.

ಉದ್ಧವ್‌ ಠಾಕ್ರೆ ಏನಂತಾರೆ?
ಹೊಸ ಗುಂಪಾಗಿ ಗುರುತಿಸಿಕೊಳ್ಳುವ ಏಕನಾಥ್‌ ಶಿಂಧೆ ನೇತೃತ್ವದ ಶಾಸಕರ ಬಣದ ಈ ಸವಾಲಿಗೆ ಉದ್ಧವ್‌ ಠಾಕ್ರೆ ಬಣ ಹೇಗೆ ಪ್ರತಿಕ್ರಿಯಿಸುತ್ತದೆ. ಹೇಗೆ ಹೊಸ ದಾಳ ಉರುಳಿಸುತ್ತದೆ ಎಂದು ಕಾದು ನೋಡಬೇಕಾಗಿದೆ. ಈಗಾಗಲೇ ಈ ಬಣದ ೧೬ ಶಾಸಕರ ಅನರ್ಹತೆ ಕೋರಿ ಡೆಪ್ಯೂಟಿ ಸ್ಪೀಕರ್‌ ಅವರಿಗೆ ಪತ್ರವನ್ನು ಬರೆದಿದೆ. ಡೆಪ್ಯುಟಿ ಸ್ಪೀಕರ್‌ ಅವರೂ ೧೬ ಮಂದಿಗೆ ನೋಟಿಸ್‌ ನೀಡಿದ್ದಾರೆ. ಹೀಗಾಗಿ ಈ ಪ್ರಕರಣ ಕಾನೂನು ಸಮರದ ಕಡೆಗೆ ಸಾಗುವ ಸಾಧ್ಯತೆ ಕಾಣಿಸಿದೆ.

Exit mobile version