Site icon Vistara News

Maha politics: ಅಘಾಡಿ ಸರಕಾರಕ್ಕೆ ಬೆಂಬಲ ವಾಪಸ್‌, ಸುಪ್ರೀಂಕೋರ್ಟ್‌ ಮುಂದೆ ಏಕನಾಥ ಶಿಂಧೆ ಬಣ ಘೋಷಣೆ

ಮುಂಬಯಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಹಾವಿಕಾಸ ಅಘಾಡಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆದಿರುವುದಾಗಿ ಏಕನಾಥ್‌ ಶಿಂಧೆ ಬಣ ಘೋಷಿಸಿದೆ. ಶಿವಸೇನೆಯ ೩೮ ಶಾಸಕರು ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅರ್ಜಿಯ ವಿಚಾರಣೆ ಇನ್ನೂ ಕೋರ್ಟ್‌ನಲ್ಲಿ ಆರಂಭವಾಗುವ ಮುನ್ನವೇ ಈ ಮಹತ್ವದ ಅಂಶ ಬೆಳಕಿಗೆ ಬಂದಿದ್ದು ಭಾರಿ ಕುತೂಹಲ ಕೆರಳಿಸಿದೆ.

ಶಿವಸೇನೆಯ ಏಕನಾಥ್‌ ಶಿಂಧೆ ಬಣ ಡೆಪ್ಯೂಟಿ ಸ್ಪೀಕರ್‌ ಅವರ ಎರಡು ನಿರ್ಧಾರಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಸಮರಕ್ಕೆ ಮುಂದಾಗಿತ್ತು. ಮೊದಲನೆಯದು ೧೬ ಮಂದಿ ರೆಬೆಲ್‌ ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಸಂಬಂಧಿಸಿದ ಶೋಕಾಸ್‌ ನೋಟಿಸ್‌ ಮತ್ತು ಎರಡನೆಯದು ಏಕನಾಥ್‌ ಶಿಂಧೆ ಅವರನ್ನು ಶಾಸಕಾಂಗ ಪಕ್ಷ ನಾಯಕತ್ವದಿಂದ ಕೆಳಗಿಳಿಸಿ ಅಜಯ್‌ ಚೌಧರಿ ಅವರನ್ನು ನೇಮಿಸಿದ್ದನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ.ಬಿ. ಪಡಿವಾಳ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ಈ ಅರ್ಜಿ ಸೋಮವಾರ ಮಧ್ಯಾಹ್ನದ ಹೊತ್ತಿಗೆ ವಿಚಾರಣೆಗೆ ಬರಲಿದೆ.

ಇದೆಲ್ಲದರ ನಡುವೆ ಸುಪ್ರೀಂಕೋರ್ಟ್‌ಗೆ ಏಕನಾಥ ಶಿಂಧೆ ಬಣ ಸಲ್ಲಿಸಿರುವ ಅರ್ಜಿಯನ್ನು ಬೆಂಬಲ ಹಿಂದೆಗೆತದ ಘೋಷಣೆ ಮಾಡಿದೆ. ಬೆಂಬಲ ವಾಪಸ್‌ ಪಡೆದಿರುವುದರಿಂದ ಸರಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಅದು ಹೇಳಿದೆ. ಇದು ಭಾರಿ ಕುತೂಹಲ ಕೆರಳಿಸಿದೆ. ಕೋರ್ಟ್‌ ಈ ವಿಚಾರವನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದು ಸರಿಯಾದ ಕ್ರಮವೇ?
ಏಕನಾಥ್‌ ಶಿಂಧೆ ಬಣ ತಾನು ಮಹಾ ವಿಕಾಸ ಅಘಾಡಿ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆಗೆದುಕೊಳ್ಳುವುದಾಗಿ ಇದುವರೆಗೂ ಸಾರ್ವಜನಿಕವಾಗಿ ಘೋಷಣೆ ಮಾಡಿಲ್ಲ. ನಿಜವೆಂದರೆ ಇಂಥಹುದೊಂದು ನಿರ್ಧಾರವನ್ನು ತೆಗೆದುಕೊಂಡಿದ್ದರೂ ಅದನ್ನು ಮೊದಲು ರಾಜ್ಯಪಾಲರಿಗೆ ತಿಳಿಸಬೇಕಾಗಿತ್ತು. ಆದರೆ, ಅಂಥ ಯಾವುದೇ ಘೋಷಣೆಯನ್ನು ಮಾಡದೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯ ಉಲ್ಲೇಖ ಮಾಡಿರುವುದು ಅಚ್ಚರಿ ಮೂಡಿಸಿದೆ.

ಇದು ತಪ್ಪು ಮಾಹಿತಿಯೇ?
ಈ ನಡುವೆ, ನಿಜಕ್ಕೂ ಶಿಂಧೆ ಬಣ ಬೆಂಬಲ ಹಿಂದೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದೆಯೇ ಅಥವಾ ಅರ್ಜಿಯಲ್ಲಿ ಇದು ತಪ್ಪಾಗಿ ಉಲ್ಲೇಖವಾಗಿದೆಯೇ ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಒಂದೊಮ್ಮೆ ಗೊಂದಲವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವ ಅವಕಾಶವೂ ಇರುತ್ತದೆ.

ನಿಜವೇ ಆಗಿದ್ದರೆ?
ಒಂದೊಮ್ಮೆ ಶಿವಸೇನೆಯ ಏಕನಾಥ್‌ ಶಿಂಧೆ ಬಣ ಬೆಂಬಲ ಹಿಂದೆ ಪಡೆದಿರುವುದು ನಿಜವೇ ಆಗಿದ್ದರೆ ಉದ್ಧವ್‌ ಠಾಕ್ರೆ ನೇತೃತ್ವದ ಅಲ್ಪಮತಕ್ಕೆ ಕುಸಿಯುವುದು ಖಚಿತ. ಹಾಗಂತ ಈ ಬೆಂಬಲ ಹಿಂದೆಗೆತದ ಮಾನ್ಯತೆ ಬಗ್ಗೆ ಮತ್ತೆ ಕಾನೂನಿನ ಪ್ರಶ್ನೆಗಳು ಏಳುತ್ತದೆ. ಒಂದು ಪಕ್ಷದ ಭಾಗವಾಗಿರುವ ಏಕನಾಥ್‌ ಶಿಂಧೆ ಗುಂಪು ಇನ್ನೂ ತಾನು ಪ್ರತ್ಯೇಕ ಗುಂಪು ಎಂದು ಸಾಂವಿಧಾನಿಕವಾಗಿ ಗುರುತಿಸಿಕೊಂಡಿಲ್ಲ. ಹೀಗಾಗಿ ಬೆಂಬಲ ಹಿಂದೆಗೆತದ ಸಾಧಕ ಬಾಧಕಗಳ ಬಗ್ಗೆ ಜಿಜ್ಞಾಸೆಗಳಿವೆ.

ಸಂಜೆ ರಾಜ್ಯಪಾಲರ ಭೇಟಿ?
ಇತ್ತ ಏಕನಾಥ್‌ ಶಿಂಧೆ ಅವರು ಸಂಜೆ ಹೊತ್ತಿಗೆ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಅವರು ಬೆಂಬಲ ಹಿಂದೆಗೆತದ ಮಾಹಿತಿಯನ್ನು ನೀಡುವರೇ ಎಂಬ ಬಗ್ಗೆ ಕುತೂಹಲವಿದೆ.

Exit mobile version