ಮಹಾರಾಷ್ಟ್ರದಲ್ಲಿ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂದರೆ, ಈಗಿರುವ ನಾಯಿಗಳನ್ನೆಲ್ಲ ಅಸ್ಸಾಂಗೆ ಕಳಿಸಬೇಕು. ಅವರು ಹೇಗೂ ನಾಯಿ ಮಾಂಸವನ್ನು ತಿನ್ನುತ್ತಾರೆ. ಒಳ್ಳೆ ಬೆಲೆಗೆ ಮಾರಾಟ ಮಾಡಬಹುದು ಎಂದು ಹೇಳುವ ಮೂಲಕ ಮಹಾರಾಷ್ಟ್ರ ಶಾಸಕ, ಪ್ರಹಾರ ಜನಶಕ್ತಿ ಪಾರ್ಟಿ ಮುಖ್ಯಸ್ಥ ಬಚ್ಚು ಕಡು (Bachchu Kadu) ವಿವಾದ ಸೃಷ್ಟಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಬಚ್ಚು ಕಡು, ‘ಬೀದಿ ನಾಯಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಅವುಗಳ ಹಾವಳಿ ಮಿತಿಮೀರಿದ್ದು, ನಿಯಂತ್ರಣ ಮಾಡುವ ಅಗತ್ಯ ಇದೆ. ಇಲ್ಲಿ ಬೀದಿ ನಾಯಿಗಳ ಸಂತತಿ ತಡೆಯಬೇಕು ಎಂದರೆ, ಒಂದಷ್ಟು ನಾಯಿಗಳನ್ನು ಅಸ್ಸಾಂಗೆ ಸಾಗಿಸಬೇಕು. ಅವರು ನಾಯಿಗಳಿಗೆ 8000 ರೂಪಾಯಿವರೆಗೆ ಬೆಲೆ ಕಟ್ಟುತ್ತಾರೆ. ಅಲ್ಲಿ ನಾಯಿಗಳ ಮಾಂಸ ಸೇವನೆ ಮಾಡುವುದರಿಂದ, ಖಸಾಯಿಖಾನೆಯಲ್ಲಿ ಕೊಲ್ಲಲಾಗುತ್ತದೆ. ಇತ್ತೀಚೆಗೆ ನಾನು ಅಸ್ಸಾಂಗೆ ಭೇಟಿ ಕೊಟ್ಟಾಗಲೇ ಗೊತ್ತಾಯಿತು, ಅಲ್ಲಿ ನಾಯಿಗಳಿಗೆ ಒಳ್ಳೆ ಬೆಲೆ ಇದೆ ಎಂಬುದು’ ಎಂದು ಹೇಳಿದರು.
ಅಷ್ಟೇ ಅಲ್ಲ, ಹೀಗೆ ಮಹಾರಾಷ್ಟ್ರದಿಂದ ಬೀದಿ ನಾಯಿಗಳನ್ನು ಅಸ್ಸಾಂಗೆ ಕಳಿಸುವ ಯೋಜನೆಯನ್ನು ಮೊದಲು ಪ್ರಾಯೋಗಿಕವಾಗಿ ಪ್ರಾರಂಭಿಸಬೇಕು. ಅದಾದ ನಂತರ ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದೂ ಶಾಸಕ ಬಚ್ಚು ಕಡು ಹೇಳಿದ್ದಾರೆ. ಆದರೆ ಬಚ್ಚು ಕಡು ಅವರ ಈ ಹೇಳಿಕೆಗೆ ತತ್ಕ್ಷಣವೇ ವಿರೋಧ ವ್ಯಕ್ತವಾಗಲು ಪ್ರಾರಂಭವಾಯಿತು. ಈ ಮಾತು ಪ್ರಾಣಿ ಹಕ್ಕು ರಕ್ಷಣಾ ಗುಂಪಿನ ಕಣ್ಣನ್ನು ಕೆಂಪಾಗಿಸಿದೆ. ಶಾಸಕನ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಜಾರ್ಖಂಡ ಬಿಜೆಪಿ ಶಾಸಕ ಬಿರಂಚಿ ನಾರಾಯಣ್ ಅವರು ಇಂಥದ್ದೇ ಮಾತುಗಳನ್ನಾಡಿದ್ದರು. ಜಾರ್ಖಂಡ್ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ. ಇಲ್ಲಿನ ಸರ್ಕಾರಕ್ಕೆ ಪರಿಹಾರ ಕಂಡು ಹಿಡಿಯಲು ಆಗುತ್ತಿಲ್ಲ, ಎಂದಾದರೆ ನಾಗಾಲ್ಯಾಂಡ್ನಿಂದ ಜನರನ್ನು ಕರೆಸಿ. ಅವರು ಸಮಸ್ಯೆಗೆ ಪರಿಹಾರ ಕೊಡುತ್ತಾರೆ’ ಎಂದು ಹೇಳಿದ್ದರು. ಅಂದರೆ ಆ ರಾಜ್ಯದವರು ನಾಯಿಗಳ ಮಾಂಸ ಸೇವನೆ ಮಾಡುವುದರಿಂದ ಕೊಂದು ತಿನ್ನುತ್ತಾರೆ ಎಂಬರ್ಥದಲ್ಲಿ ಅವರು ಹೇಳಿದ್ದರು.
ಇದನ್ನೂ ಓದಿ: ಎನ್ಐಎ ಹೇಳಿದ್ದ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಬಂಧಿಸಿದ ಇಂದೋರ್ ಪೊಲೀಸರು; ವಿಚಾರಣೆ ನಡೆಸಿದ ಮಹಾರಾಷ್ಟ್ರ ಎಟಿಎಸ್