ಲಖನೌ: ಆನ್‌ಲೈನ್ ಮೀಟಿಂಗ್‌ನ ರಗಳೆಗಳು ಒಂದೆರಡಲ್ಲ. ಅದರಲ್ಲೂ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹುತೇಕ ಜನ ಮನೆಯಿಂದಲೇ ಕೆಲಸ (Work From Home) ಮಾಡುತ್ತಿದ್ದ ಕಾರಣ ಆನ್‌ಲೈನ್ ಮೀಟಿಂಗ್ ವೇಳೆ ಹತ್ತಾರು ಅವಾಂತರಗಳು ನಡೆದಿದ್ದವು. ಮೀಟಿಂಗ್‌ನಲ್ಲಿದ್ದಾಗಲೇ ಹೆಂಡತಿ ಗಂಡನಿಗೆ ಕಿಸ್ ಕೊಟ್ಟಿದ್ದು, ಮೀಟಿಂಗ್ ನಡೆಯುತ್ತಿದ್ದಾಗಲೇ ಮಕ್ಕಳು ಓಡಿ ಬಂದು ಕಿರುಚಿದ್ದು ಸೇರಿ ಹಲವು ಅವಾಂತರಗಳು ನಡೆದಿದ್ದವು. ಈಗಲೂ ಈ ಆನ್‌ಲೈನ್ ಮೀಟಿಂಗ್ ಅವಾಂತರಗಳು ನಡೆಯುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ ಶರ್ಟ್ ಧರಿಸದೆ ಆನ್‌ಲೈನ್ ಮೀಟಿಂಗ್‌ಗೆ ಹಾಜರಾದ ಸರ್ಕಾರಿ ಅಧಿಕಾರಿಯನ್ನು (Viral News) ಅಮಾನತುಗೊಳಿಸಲಾಗಿದೆ.
ಉತ್ತರ ಪ್ರದೇಶ ಶಿಕ್ಷಣ ಇಲಾಖೆಯ ಮಹಾ ನಿರ್ದೇಶಕ ವಿಜಯ್ ಕಿರಣ್ ಆನಂದ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲೆಗಳ ಸಭೆ ನಡೆಸುತ್ತಿದ್ದರು. ಆಯಾ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಯೋಜನೆಗಳು, ಅವುಗಳ ಪ್ರಗತಿ, ಯೋಜನೆಗಳ ಸಮರ್ಪಕ ಜಾರಿ ಸೇರಿ ಹಲವು ವಿಷಯಗಳನ್ನು ಚರ್ಚಿಸುತ್ತಿದ್ದರು. ಬಹುತೇಕ ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ, ಅಧಿಕಾರಿಯೊಬ್ಬರು ಅಂಗಿಯನ್ನೇ ಧರಿಸದೆ ವಿಡಿಯೊ ಕಾನ್ಫರೆನ್ಸ್‌ಗೆ ಹಾಜರಾದರು. ಹಾಗಾಗಿ, ವಿಜಯ್ ಕಿರಣ್ ಆನಂದ್ ಅವರು ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.
ಬನಿಯನ್ ಮೇಲೆಯೇ ಅಧಿಕಾರಿ ವಿಡಿಯೊ ಕಾನ್ಫರೆನ್ಸ್‌ಗೆ ಹಾಜರಾಗಿದ್ದು ಬೇರೆ ಅಧಿಕಾರಿಗಳಿಗೆ ಮುಜುಗರ ತಂದಿದೆ. ಮಹಿಳೆಯರು ಕೂಡ ಸಭೆಗೆ ಹಾಜರಾದ ಕಾರಣ ಅವರಿಗೆ ಅಧಿಕಾರಿಯ ವರ್ತನೆ ಹಿಡಿಸಲಿಲ್ಲ. ಹಾಗೆಯೇ, ಸರ್ಕಾರಿ ಸಭೆಗೆ ಅಧಿಕಾರಿಯೊಬ್ಬರು ಅಂಗಿಯನ್ನೇ ಧರಿಸದೆ ಹಾಜರಾಗಿದ್ದು ಅಶಿಸ್ತಾಗಿದೆ. ಇದನ್ನು ಪರಿಗಣಿಸಿ ಮಹಾ ನಿರ್ದೇಶಕರು ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. ಆದರೆ, ಸಸ್ಪೆಂಡ್ ಆದ ಅಧಿಕಾರಿಯು ಯಾವ ಜಿಲ್ಲೆಯವರು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Viral Video : ಜನಪದ ಹಾಡೂ ವೈರಲ್! ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡಿಗೆ ಬಗೆಬಗೆಯ ರೀಲ್ಸ್!
ಸರ್ಕಾರಿ ಅಧಿಕಾರಿಯೊಬ್ಬರು ಬನಿಯನ್ ಮೇಲೆಯೇ ಮೀಟಿಂಗ್‌ಗೆ ಹಾಜರಾದ ಸುದ್ದಿಯೀಗ ವೈರಲ್ ಆಗಿದೆ. ಅಧಿಕಾರಿಯ ವರ್ತನೆ ಕುರಿತು ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಒಂದಷ್ಟು ಜನ ವ್ಯಂಗ್ಯ ಮಾಡಿ ಅಧಿಕಾರಿಯ ಕಾಲೆಳೆದಿದ್ದಾರೆ. ಆದರೆ, ವಿಡಿಯೊ ಕಾನ್ಫರೆನ್ಸ್ ಇದೆ ಎಂದು ಅವಸರದಲ್ಲಿ ಬನಿಯನ್ ಧರಿಸಿಯೇ ಸಭೆಗೆ ಹಾಜರಾದ ಅಧಿಕಾರಿಗೆ ಅಮಾನತಿನ ಶಿಕ್ಷೆಗಿಂತ, ಸುದ್ದಿ ವೈರಲ್ ಆದ ಅವಮಾನವೇ ಜಾಸ್ತಿ ದುಃಖ ತಂದಿರಬೇಕು.