ಮುಂಬೈ: ಮಹಾರಾಷ್ಟ್ರ ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಬಣದ ಬಲ ಕುಸಿಯುತ್ತಿದೆ. ಠಾಕ್ರೆ ಬಣದಲ್ಲಿದ್ದ 12 ರಾಜ್ಯ ಘಟಕಗಳ ಮುಖ್ಯಸ್ಥರು ಏಕನಾಥ ಶಿಂಧೆ ಬಣ ಸೇರ್ಪಡೆಯಾಗಿದ್ದಾರೆ. ಒಟ್ಟು 15 ರಾಜ್ಯ ಘಟಕಗಳ ಮುಖ್ಯಸ್ಥರು ಇದ್ದರು. ಇವರೆಲ್ಲ ಉದ್ಧವ್ ಠಾಕ್ರೆ ಬಣದಲ್ಲೇ ಇದ್ದರು. ಅದರಲ್ಲಿ 12 ಜನರೀಗ ಶಿಂಧೆ ಕಡೆ ವಾಲಿದ್ದಾರೆ. ಶಿವಸೇನೆಯ ಎರಡೂ ಬಣಗಳ ನಡುವೆ ಬಲಾಬಲ ಜಗಳ ನಡೆಯುತ್ತಿರುವ ಮಧ್ಯೆಯೇ ಉದ್ಧವ್ ಠಾಕ್ರೆ ಬಣದಿಂದ 12 ಪ್ರಮುಖರೇ ಶಿಂಧೆ ಬಣಕ್ಕೆ ಹೋಗಿದ್ದು, ಠಾಕ್ರೆಗೆ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಶಿವಸೇನೆಯ ದೆಹಲಿ ಮುಖ್ಯಸ್ಥ ಸಂದೀಪ್ ಚೌಧರಿ, ಮಣಿಪುರ ಮುಖ್ಯಸ್ಥ ತೋಂಬಿ ಸಿಂಗ್, ಮಧ್ಯಪ್ರದೇಶದ ತಾಡೇಶ್ವರ್ ಮಹೇಶ್ವರ್, ಛತ್ತೀಸ್ಗಢ್ ಮುಖ್ಯಸ್ಥ ಧನಂಜಯ ಪರಿಹಾರ್, ಗುಜರಾತ್ನ ಎಸ್.ಆರ್.ಪಾಟೀಲ್, ರಾಜಸ್ಥಾನದ ಮುಖ್ಯಸ್ಥ ಲಖನ್ ಸಿಂಗ್ ಪವಾರ್, ಹೈದರಾಬಾದ್ನ ಮುರಾರಿ ಅಣ್ಣಾ, ಗೋವಾದ ಜಿತೇಶ್ ಕಾಮತ್, ಕರ್ನಾಟಕದ ಶಿವಸೇನೆ ಮುಖ್ಯಸ್ಥ ಎ. ಹಕಾರಿ, ಪಶ್ಚಿಮ ಬಂಗಾಳದ ಶಾಂತಿ ದತ್ತಾ, ಒಡಿಶಾದ ಜ್ಯೋತಿಶ್ರೀ ಪ್ರಸನ್ನ ಕುಮಾರ್, ತ್ರಿಪುರಾ ರಾಜ್ಯ ಉಸ್ತುವಾರಿ ಬರಿವಾದೇವ್ನಾಥ್ ಇಂದು ತಮ್ಮ ಬೆಂಬಲವನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಿದ್ದಾರೆ. ಠಾಕ್ರೆ ಗುಂಪಿನಿಂದ ಹೊರಬಿದ್ದಿದ್ದಾರೆ.
ಶಿವಸೇನೆಯಲ್ಲಿ ಎರಡು ಬಣಗಳಾಗಿವೆ. ಅದರಲ್ಲಿ ಎರಡೂ ಬಣಗಳು ತಾವೇ ನಿಜವಾದ ಶಿವಸೇನೆ ಎಂದೇ ವಾದಿಸುತ್ತಿವೆ. ಸದ್ಯ ಈ ವಿವಾದದ ವಿಚಾರಣೆಯೀಗ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ. ‘ತಮ್ಮ ಬಳಿಯೇ ಶಿವಸೇನೆಯ ಹೆಚ್ಚಿನ ಶಾಸಕರು, ಮುಖಂಡರು ಇದ್ದಾರೆ. ಹಾಗಾಗಿ ತಾವೇ ನಿಜವಾದ ಶಿವಸೇನೆ’ ಎಂದು ಶಿಂಧೆ ಕ್ಯಾಂಪ್ ಹೇಳಿದರೆ, ಇಲ್ಲ ಶಿವಸೇನೆಯನ್ನು ಹುಟ್ಟುಹಾಕಿದ್ದೇ ನನ್ನ ತಂದೆಯವರು..ಹಾಗಾಗಿ ನಾವೇ ನಿಜವಾದ ಶಿವಸೇನೆ ಎಂದು ಉದ್ಧವ್ ಹೇಳುತ್ತಿದ್ದಾರೆ.
ಇದನ್ನೂ ಓದಿ: ಏಕನಾಥ ಶಿಂಧೆ, ಉದ್ಧವ್ ಠಾಕ್ರೆಗೆ ಚುನಾವಣಾ ಆಯೋಗ ನೋಟಿಸ್; ಆಗಸ್ಟ್ 8 ಡೆಡ್‌ಲೈನ್