Site icon Vistara News

ಜಾಹೀರಾತು ವಿಷಯಕ್ಕೆ ಶಿಂಧೆ-ಫಡ್ನವಿಸ್‌ ಬಿಕ್ಕಟ್ಟು ಜಗಜ್ಜಾಹೀರು, ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನ

Tussle Between Eknath Shinde And Devendra Fadnavis in Maharashtra

Shiv Sena Finally Corrects Shinde Advertisement After Devendra Fadnavis Camp Sees Red

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ಒಂದು ವರ್ಷದಿಂದ ಆಡಳಿತಕ್ಕಿಂತ ರಾಜಕೀಯ ಮೇಲಾಟ, ತಂತ್ರ, ಪ್ರತಿತಂತ್ರಗಳೇ ಹೆಚ್ಚಾಗಿವೆ. ಮಹಾ ವಿಕಾಸ್‌ ಅಘಾಡಿ ಸರ್ಕಾರದ ಪತನ, ಶಿವಸೇನೆ ಇಬ್ಭಾಗ, ಏಕನಾಥ್‌ ಶಿಂಧೆ ಬಂಡಾಯದ ಬಳಿಕ ಈಗ ಜಾಹೀರಾತು ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಏಕನಾಥ್‌ ಶಿಂಧೆ ಬಣದ ಶಿವಸೇನೆ ಜಾಹೀರಾತು ನೀಡಿದ ಬಳಿಕ ದೇವೇಂದ್ರ ಫಡ್ನವಿಸ್‌ ಬಣ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಶಿಂಧೆ ಅವರು ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದು, ಬುಧವಾರ ಹೊಸ ಜಾಹೀರಾತು ನೀಡಿದ್ದಾರೆ.

ಮಂಗಳವಾರದ ಜಾಹೀರಾತಿನಲ್ಲಿ ಏನಿತ್ತು?

ಶಿವಸೇನೆಯು ಪತ್ರಿಕೆಗಳಿಗೆ ನೀಡಿದ ಮುಖಪುಟ ಜಾಹೀರಾತಿನಲ್ಲಿ ಉಲ್ಲೇಖಿಸಲಾದ ಹಲವು ಅಂಶಗಳು ವಿವಾದಕ್ಕೀಡಾಗಿದ್ದವು. ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್‌ ಅವರಿಗಿಂತ ಏಕನಾಥ್‌ ಶಿಂಧೆ ಹೆಚ್ಚು ಅರ್ಹ ಎಂಬ ಸಮೀಕ್ಷೆಯನ್ನು ಪ್ರಕಟಿಸಲಾಗಿತ್ತು. ಜಾಹೀರಾತಿನಲ್ಲಿ ದೇವೇಂದ್ರ ಫಡ್ನವಿಸ್‌ ಅವರ ಫೋಟೊ ಇರಲಿಲ್ಲ. ಈಗಾಗಲೇ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿ ಗೆದ್ದರೆ ಯಾರು ಸಿಎಂ ಆಗುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಇದರ ಬೆನ್ನಲ್ಲೇ, ಶಿಂಧೆ ಕುರಿತು ಸಮೀಕ್ಷಾ ಜಾಹೀರಾತು ಪ್ರಕಟಿಸಿದ್ದು, ಫಡ್ನವಿಸ್‌ ಬಣಕ್ಕೆ ಅಸಮಾಧಾನ ತಂದಿತ್ತು.

ಮಂಗಳವಾರ ಪ್ರಕಟವಾದ ಜಾಹೀರಾತು

ಡ್ಯಾಮೇಜ್‌ ಕಂಟ್ರೋಲ್‌ಗೆ ಶಿಂಧೆ ಯತ್ನ

ಜಾಹೀರಾತು ಕುರಿತು ಫಡ್ನವಿಸ್‌ ಬಣದಿಂದ ಆಕ್ರೋಶ, ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಏಕನಾಥ್‌ ಶಿಂಧೆ ಅವರು ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಬುಧವಾರ ಪತ್ರಿಕೆಗಳಲ್ಲಿ ಹೊಸ ಜಾಹೀರಾತು ಪ್ರಕಟಿಸಿದ್ದು, ದೇವೇಂದ್ರ ಫಡ್ನವಿಸ್‌ ಅವರ ಫೋಟೊ ಪ್ರಕಟಿಸಲಾಗಿದೆ. ಮಂಗಳವಾರ ಶಿವಸೇನೆ ಪಕ್ಷದ ಚಿಹ್ನೆ ಮಾತ್ರ ಇತ್ತು. ಹೊಸ ಜಾಹೀರಾತಿನಲ್ಲಿ ಬಿಜೆಪಿ ಚಿಹ್ನೆಯನ್ನೂ ಅಳವಡಿಸಲಾಗಿದೆ. ಬಾಳಾಸಾಹೇಬ್‌ ಠಾಕ್ರೆ ಅವರ ಫೊಟೊವನ್ನು ಕೂಡ ಪ್ರಕಟಿಸಲಾಗಿದೆ. ಆ ಮೂಲಕ ಶಿಂಧೆ ಅವರು ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸಿದ್ದಾರೆ.

ಬುಧವಾರ ಪ್ರಕಟವಾದ ಜಾಹೀರಾತು

ಬಿಕ್ಕಟ್ಟಿನ ಸುಳಿವು ಇದೇ ಮೊದಲಲ್ಲ

ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ಹಾಗೂ ದೇವೇಂದ್ರ ಫಡ್ನವಿಸ್‌ ನಡುವೆ ಮುನಿಸಿದೆ ಎಂಬ ಮಾತು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಅದರಲ್ಲೂ, ಕೆಲ ದಿನಗಳ ಹಿಂದಷ್ಟೇ ಏಕನಾಥ್‌ ಶಿಂಧೆ ಪುತ್ರ, ಸಂಸದರೂ ಆದ ಶ್ರೀಕಾಂತ್‌ ಶಿಂಧೆ ಅವರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದರು.

ಇದನ್ನೂ ಓದಿ: Maharashtra Politics: ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಬಿರುಕು? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಶಿಂಧೆ ಪುತ್ರ

“ಡೊಂಬಿವಿಲಿಯ ಕೆಲವು ಬಿಜೆಪಿ ನಾಯಕರು ಮೈತ್ರಿ ಕೂಟ ಸರ್ಕಾರದಲ್ಲಿ ಅಡ್ಡಿಗಳನ್ನು ಉಂಟು ಮಾಡುತ್ತಿದ್ದಾರೆ. ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಅವರು ಈ ದಾರಿ ತುಳಿಯುತ್ತಿದ್ದಾರೆ. ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ. ಮೈತ್ರಿಕೂಟದ ನಾಯಕತ್ವ ನಿರ್ಧರಿಸುವ ಯಾವುದೇ ಅಭ್ಯರ್ಥಿಗೆ ನಾನು ಬೆಂಬಲ ನೀಡಲು ಸಿದ್ಧ” ಎಂದು ಹೇಳಿದ್ದರು.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version