Site icon Vistara News

ಶಿವಸೇನಾ ಸಂಸದ ಸಂಜಯ್‌ ರಾವತ್‌ ಅರೆಸ್ಟ್‌, ಇಂದು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ

ಮುಂಬಯಿ: ಬಹುಕೋಟಿ ಪತ್ರ ಚಾಲ್‌ ಭೂ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಸೇನೆಯ ಸಂಸದ ಸಂಜಯ್‌ ರಾವತ್‌ ಅವರನ್ನು ಭಾನುವಾರ ಬಂಧಿಸಿದ್ದಾರೆ.

ಬಂಧಿತ ಸಂಜಯ್‌ ರಾವತ್‌ ಅವರನ್ನು ಇಂದು ಪಿಎಂಎಲ್‌ಎ ಕೋರ್ಟ್‌ ಎದುರು ಹಾಜರುಪಡಿಸುವ ಸಾಧ್ಯತೆ ಇದೆ. ಅಕ್ರಮ ಹಣ ವರ್ಗಾವಣೆ ಕಾಯಿದೆ-೨೦೦೨ ಅಡಿಯಲ್ಲಿ ರಾವತ್‌ ಅವರನ್ನು ಬಂಧಿಸಲಾಗಿದೆ.

೧೧ ಲಕ್ಷ ರೂ. ನಗದು ಜಪ್ತಿ: ಜಾರಿ ನಿರ್ದೇಶನಾಲಯವು ಸಂಜಯ್‌ ರಾವತ್‌ ನಿವಾಸದಿಂದ ೧೧.೫೦ ಲಕ್ಷ ರೂ. ನಗದನ್ನು ಭಾನುವಾದ ದಾಳಿಯ ವೇಳೆ ಜಪ್ತಿ ಮಾಡಿದೆ.

“ಸಂಜಯ್‌ ರಾವತ್‌ ಅವರಿಗೆ ಇ.ಡಿ ಹೆದರುತ್ತಿದೆ. ಹೀಗಾಗಿಯೇ ಅವರನ್ನು ಅರೆಸ್ಟ್‌ ಮಾಡಲಾಗಿದೆ. ಪತ್ರ ಚಾಲ್‌ ಹಗರಣ ಕುರಿತ ದಾಖಲೆಗಳು ನಕಲಿಯಾಗಿದ್ದು, ಅವುಗಳಿಗೂ ಸಂಜಯ್‌ ರಾವತ್‌ಗೂ ಯಾವುದೇ ಸಂಬಂಧ ಇಲ್ಲʼʼ ಎಂದು ಸೋದರ ಸುನಿಲ್ ರಾವತ್‌ ಹೇಳಿದ್ದಾರೆ.

ಭಾನುವಾರ ಬೆಳಗ್ಗೆ ರಾವತ್‌ ಮನೆಗೆ ಇ.ಡಿ ದಾಳಿ:

ಭಾನುವಾರ ಬೆಳಗ್ಗೆ ಮುಂಬಯಿಯಲ್ಲಿರುವ ಮನೆಗೇ ನೇರವಾಗಿ ಲಗ್ಗೆ ಇಟ್ಟ ಅಧಿಕಾರಿಗಳು ಮಧ್ಯಾಹ್ನದವರೆಗೂ ದಾಖಲೆಗಳನ್ನು ಜಾಲಾಡಿದ್ದಾರೆ. ಅಂತಿಮವಾಗಿ ಸಂಜೆಯ ಹೊತ್ತಿಗೆ ಅವರನ್ನು ವಶಕ್ಕೆ ಪಡೆದಿದ್ದರು. ಅಧಿಕಾರಿಗಳು ಅವರನ್ನು ತಮ್ಮ ಜತೆಗೇ ಕರೆದೊಯ್ಯಲಿದ್ದಾರೆ ಎಂದು ಹೇಳಲಾಗಿದೆ.

ರಾವತ್‌ ಅವರ ಪತ್ನಿಯೂ ಒಳಗೊಂಡಿರುವ ಪತ್ರ ಚಾಲ್‌ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್‌ ನೀಡಿದ್ದರೂ ನಾನಾ ಕಾರಣ ನೀಡಿ ಮುಂದಕ್ಕೆ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ನೇರವಾಗಿ ಮುಂಬಯಿಯ ಮನೆಗೇ ಲಗ್ಗೆ ಇಟ್ಟಿದ್ದರು.

ಶಿವಸೇನೆಯಲ್ಲಿ ಬಂಡಾಯ ಚಟುವಟಿಕೆಗಳು ಉತ್ತುಂಗದಲ್ಲಿದ್ದಾಗಲೇ ಅವರಿಗೆ ಇ.ಡಿ. ಕಚೇರಿಯಿಂದ ನೋಟಿಸ್‌ ಬಂದಿತ್ತು. ಆದರೆ, ಅವರು ಹೋಗಿರಲಿಲ್ಲ. ಇದು ಶಿವಸೇನೆಯ ಉದ್ಧವ್‌ ಠಾಕ್ರೆ ಬಣ ಶಕ್ತಿ ಕುಂದಿಸುವ ಪ್ರಯತ್ನ ಎಂದು ಅವರು ಆರೋಪಿಸಿದ್ದರು. ಬಳಿಕ ಸಂಜಯ್‌ ರಾವತ್‌ ಅವರು ಜುಲೈ 1ರಂದು ಇ.ಡಿ ಕಚೇರಿಗೆ ಹಾಜರಾಗಿದ್ದರು. ಅಂದು ಸಣ್ಣ ಮಟ್ಟದ ವಿಚಾರಣೆ ಎದುರಿಸಿದ್ದ ಅವರು ಯಾವಾಗ ಕರೆದರೂ ಬರುತ್ತೇನೆ ಎಂದಿದ್ದರು. ಈ ನಡುವೆ, ಜುಲೈ ೨೦ರಂದು ಹಾಜರಾಗುವಂತೆ ಇ.ಡಿ ಸೂಚನೆ ನೀಡಿತ್ತು. ಆಗ ಸಂಸತ್‌ ಅಧಿವೇಶನದ ನೆಪ ಹೇಳಿದ್ದರು. ಆಗ ಇ.ಡಿ. ಜುಲೈ ೨೭ಕ್ಕೆ ಬನ್ನಿ ಎಂದು ಹೇಳಿತ್ತು. ಆಗಲೂ ಅಧಿವೇಶನದ ಕಾರಣವನ್ನೇ ನೀಡಿದ್ದರು ಸಂಜಯ್‌ ರಾವತ್‌. ಇದು ಇ.ಡಿ. ಅಧಿಕಾರಿಗಳನ್ನು ಕೆರಳಿಸಿತ್ತು.

ಏನಿದು ಪತ್ರಾ ಚಾಲ್‌ ಭೂ ಹಗರಣ?
ಪತ್ರಾ ಚಾಲ್‌ ಭೂಹಗರಣ ಎನ್ನುವುದು ೧೦೩೪ ಕೋಟಿ ರೂ. ಹಗರಣ ಎಂದು ಹೇಳಲಾಗಿದೆ. ಇದರಲ್ಲಿ ಪ್ರಧಾನವಾಗಿರುವುದು ಸಂಜಯ್‌ ರಾವತ್‌ ಅವರ ಪತ್ನಿ ವರ್ಷಾ ರಾವತ್‌. ಈ ಹಗರಣ ಹಿಂದೆಯೇ ಬೆಳಕಿಗೆ ಬಂದು ಸಂಜಯ್‌ ರಾವತ್‌ ಅವರ ಆಪ್ತರಾದ ಪ್ರವೀಣ್‌ ರಾವತ್‌ ಅವರಿಗೆ ಸೇರಿದ ೯ ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ವರ್ಷಾ ರಾವತ್‌ ಅವರಿಗೆ ಸೇರಿದ ೨ ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಭೂಮಿಗೆ ಸಂಬಂಧಿಸಿದ ದಾಖಲೆ ಇತ್ಯರ್ಥಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದಕ್ಕೆ ಭಾರಿ ಪ್ರಮಾಣದ ಲಂಚ ಪಡೆಯಲಾಗಿದೆ ಎನ್ನುವುದು ಪ್ರಧಾನ ಆರೋಪ. ಪ್ರವೀಣ್‌ ರಾವತ್‌ ಅವರು ಸುಮಾರು ೫೫ ಕೋಟಿ ರೂಪಾಯಿಯನ್ನು ವರ್ಷಾ ಅವರ ಖಾತೆಗೆ ಹಸ್ತಾಂತರಿಸಿದ್ದನ್ನು ಇ.ಡಿ ಗಮನಿಸಿದೆ. ಇದರ ಜತೆಗೆ ಸಂಜಯ್‌ ರಾವತ್‌ ಮತ್ತು ಅವರ ಆಪ್ತರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಿಮಾನ ಯಾನ ಟಿಕೆಟ್‌ಗಳನ್ನು ಕೂಡಾ ಬುಕ್‌ ಮಾಡಲಾಗಿತ್ತು.

Exit mobile version