ನವದೆಹಲಿ: ಶಿವಸೇನೆಯ ಬಹುತೇಕ ಶಾಸಕರನ್ನು ಸೆಳೆದು, ಹೊಸದೊಂದು ಬಣ ರಚಿಸಿ, ಬಿಜೆಪಿ ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಏಕನಾಥ್ ಶಿಂಧೆ (Eknath Shinde) ಅವರಿಗೆ ಭಾರಿ ಮುನ್ನಡೆ ಸಿಕ್ಕಿದೆ. ಶಿವಸೇನೆ ಹೆಸರು ಹಾಗೂ ಪಕ್ಷದ ಚಿಹ್ನೆಯಾದ ಬಿಲ್ಲು ಮತ್ತು ಬಾಣ ಚಿಹ್ನೆಯನ್ನು ಚುನಾವಣೆ ಆಯೋಗವು ಏಕನಾಥ್ ಶಿಂಧೆ ಬಣಕ್ಕೆ ನೀಡಿದೆ. ಇದರಿಂದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಮತ್ತೊಂದು ಬಣಕ್ಕೆ ಭಾರಿ ಹಿನ್ನಡೆಯಾಗಿದೆ.
ಕಳೆದ ವರ್ಷ ಮಹಾ ವಿಕಾಸ ಅಘಾಡಿ ಮೈತ್ರಿಯಿಂದ ಬಂಡಾಯವೆದ್ದಿದ್ದ ಏಕನಾಥ್ ಶಿಂಧೆ, 40ಕ್ಕೂ ಹೆಚ್ಚು ಶಾಸಕರನ್ನು ಸೆಳೆದು, ಶಿವಸೇನೆಯ ಮತ್ತೊಂದು ಬಣ ರಚಿಸಿದ್ದರು. ಹಾಗೆಯೇ, ನಮ್ಮದೇ ನಿಜವಾದ ಶಿವಸೇನೆ ಎಂದು, ನಮಗೇ ಬಿಲ್ಲು ಮತ್ತು ಬಾಣದ ಗುರುತು ನೀಡಬೇಕು ಎಂದು ಎರಡೂ ಬಣಗಳು ಚುನಾವಣೆ ಆಯೋಗದ ಮೊರೆ ಹೋಗಿದ್ದವು. ಚುನಾವಣೆ ಆಯೋಗವು ಕಳೆದ ಉಪ ಚುನಾವಣೆಯಲ್ಲಿ ಎರಡೂ ಬಣಗಳಿಗೆ ಬೇರೆ ಚಿಹ್ನೆ ಹಾಗೂ ಹೆಸರು ನೀಡಿತ್ತು. ಆದರೀಗ. ಏಕನಾಥ್ ಶಿಂಧೆ ಬಣವೇ ಮೂಲ ಶಿವಸೇನೆಯಾಗಿ ಹೊರಹೊಮ್ಮಿದೆ.
“ಇದು ನಮಗೆ ಮಹತ್ವದ ದಿನ. ಮೆರಿಟ್‌ನಂತೆಯೇ ಚುನಾವಣೆ ಆಯೋಗ ತೀರ್ಪು ನೀಡಲಿದೆ ಎಂಬುದನ್ನು ಮೊದಲಿನಿಂದಲೂ ಹೇಳುತ್ತಿದ್ದೇವೆ. ನಾವೇ ನಿಜವಾದ ಶಿವಸೇನೆ ಎಂಬುದಾಗಿಯೂ ಹೇಳಿದ್ದೇವೆ. ಅದರಂತೆ, ನಮಗೆ ಮೂಲ ಶಿವಸೇನೆಯ ಚಿಹ್ನೆ ದೊರೆತಿದೆ. ಇದರಿಂದ ನಮಗೆ ಭಾರಿ ಸಂತಸವಾಗಿದೆ” ಎಂದು ಏಕನಾಥ್ ಶಿಂಧೆ ಬಣದ ವಕ್ತಾರೆ ಶೀತಲ್ ಮಾತ್ರೆ ತಿಳಿಸಿದ್ದಾರೆ.
ಉದ್ಧವ್ ಪಕ್ಷದ ಗತಿಯೇನು?
ಚುನಾವಣೆ ಆಯೋಗದ ತೀರ್ಪಿನಂತೆ, ಬಾಳಾ ಸಾಹೇಬ್ ಠಾಕ್ರೆ ಎಂಬ ಧೀಮಂತ ನಾಯಕ ಕಟ್ಟಿದ ಪಕ್ಷದ ಹೆಸರು ಹಾಗೂ ಚಿಹ್ನೆಯು ಅವರ ಪುತ್ರ ಉದ್ಧವ್ ಠಾಕ್ರೆ ಅವರಿಂದಲೇ ದೂರವಾದಂತಾಗಿದೆ. ಈಗ ಉದ್ಧವ್ ಠಾಕ್ರೆ ಬಣಕ್ಕೆ ಉಪಚುನಾವಣೆಯಲ್ಲಿ ಚುನಾವಣೆ ಆಯೋಗವು ನೀಡಿದ “ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)” ಎಂಬ ಹೆಸರು ಮುಂದುವರಿಯಲಿದೆ. ಹಾಗೆಯೇ, ಉರಿಯುವ ಜ್ಯೋತಿ (ದೀವಟಿಗೆ) (Flaming Torch) ಪಕ್ಷದ ಚಿಹ್ನೆಯಾಗಿರಲಿದೆ.
ಇದನ್ನೂ ಓದಿ: Nirbhaya Fund Misuse | ಏಕನಾಥ್ ಶಿಂಧೆ ಸಚಿವರಿಂದ ನಿರ್ಭಯಾ ನಿಧಿಯ 30 ಕೋಟಿ ರೂ. ಗುಳುಂ, ಕಾರಿಗಾಗಿ ಹಣ ದುರ್ಬಳಕೆ?