Site icon Vistara News

ಶಿವಸೇನಾದಿಂದ 16 ರೆಬೆಲ್‌ ಶಾಸಕರಿಗೆ ನೋಟಿಸ್‌, ಅವಿಶ್ವಾಸ ಗೊತ್ತುವಳಿಗೆ ಶಿಂಧೆ ಬಣ ಸಜ್ಜು

maharastra politics

ಮುಂಬಯಿ: ಮಹಾರಾಷ್ಟ್ರ ರಾಜಕಾರಣ ರೋಚಕ ಘಟ್ಟಕ್ಕೆ ಸಾಗುತ್ತಿದ್ದು, ಶಿವ ಸೇನಾ ಪಕ್ಷದಿಂದ ಬಂಡಾಯವೆದ್ದಿರುವ ೧೬ ಶಾಸಕರನ್ನು ಅನರ್ಹಗೊಳಿಸಲು ವಿಧಾನಸಭೆಯ ಡೆಪ್ಯುಟಿ ಸ್ಪೀಕರ್‌ ನರಹರಿ ಝಿರ್ವಾಲ್‌ ಅವರಿಗೆ ಅರ್ಜಿ ಸಲ್ಲಿಸಿದೆ. ಮತ್ತೊಂದು ಕಡೆ ಏಕನಾಥ್‌ ಶಿಂಧೆ ನೇತೃತ್ವದ ಶಾಸಕರ ಬಣ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್‌ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದೆ.

ಶಿವಸೇನಾ ಆರಂಭದಲ್ಲಿ ೧೨ ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿತ್ತು. ಇದೀಗ ೧೬ಕ್ಕೆ ಏರಿಕೆಯಾಗಿದೆ. ಅನರ್ಹತೆ ಕುರಿತ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಶಾಸಕರಿಗೆ ಒಂದೆರಡು ದಿನಗಳಲ್ಲಿ ನೋಟಿಸ್‌ ಜಾರಿಯಾಗಬಹುದು. ಹೀಗಾಗಿ ಉಭಯ ಬಣಗಳ ನಡುವೆ ಜಟಿಲವಾದ ಕಾನೂನು ಸಂಘರ್ಷ ಶುರುವಾಗಿದೆ. ಶಿವಸೇನಾ ಪಕ್ಷದ ಕಾರ್ಯಕಾರಿಣೆ ಶನಿವಾರ ನಡೆಯಲಿದ್ದು ಸಿಎಂ ಉದ್ಧವ್‌ ಠಾಕ್ರೆ ಮುಂದಿನ ನಡೆ ಬಗ್ಗೆ ನಿರ್ಧರಿಸುವ ನಿರೀಕ್ಷೆ ಇದೆ.

ಶಿವಸೇನಾದ ಮೂರನೇ ಎರಡಕ್ಕೂ ಹೆಚ್ಚು ಶಾಸಕರ ಬೆಂಬಲ ಗಳಿಸಿರುವ ಏಕನಾಥ್‌ ಶಿಂಧೆ ಬಣ ಸದ್ಯ ಪ್ರಾಬಲ್ಯ ಸಾಧಿಸಿದ್ದು, ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವ ಮುನ್ನ ಕೆಲ ತಾಂತ್ರಿಕ ಅಡಚಣೆಗಳನ್ನು ಎದುರಿಸುತ್ತಿದೆ. ಆದರೆ ಅದರಿಂದ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದೆ.

” ನಾವು ಮೊದಲು ಡೆಪ್ಯುಟಿ ಸ್ಪೀಕರ್‌ ಬಳಿ ೧೨ ಶಾಸಕರ ಅನರ್ಹತೆಗೆ ಕೋರಿದ್ದೆವು. ಈಗ ಹೆಚ್ಚುವರಿ ೪ ಶಾಸಕರನ್ನು ಅನರ್ಹಗೊಳಿಸಲು ಮನವಿ ಸಲ್ಲಿಸಿದ್ದೇವೆ. ಕಾನೂನು ಪ್ರಕಾರ ರಾಜಕೀಯ ಪಕ್ಷವೊಂದರಿಂದ ಮೂರನೇ ಎರಡರಷ್ಟು ಶಾಸಕರು ಪ್ರತ್ಯೇಕವಾದಾಗ ಮತ್ತೊಂದು ಪಕ್ಷ ಜತೆ ವಿಲೀನವಾಗಬೇಕು. ಈಗ ಬಂಡಾಯವೆದ್ದಿರುವವರೆಲ್ಲ ಶಿವಸೇನಾದಿಂದ ಕಾಯಂ ಆಗಿ ಹೊರನಡೆದಿದ್ದಾರೆ. ಬೇರೆ ಪಕ್ಷದ ಜತೆ ವಿಲೀನವಾಗಿಲ್ಲʼʼ ಎಂದು ಶಿವಸೇನಾ ಸಂಸದ ಸರವಿಂದ್‌ ಸಾವಂತ್‌ ತಿಳಿಸಿದ್ದಾರೆ.

ಜಟಿಲ ಕಾನೂನು ಸಂಘರ್ಷ?

ಕಾನೂನು ತಜ್ಞರ ಪ್ರಕಾರ ಏಕನಾಥ್‌ ಶಿಂಧೆ ಅವರು ಶಿವಸೇನಾದ ಮೂರನೇ ಎರಡರಷ್ಟು ಶಾಸಕರ ಬೆಂಬಲ ಗಳಿಸಿದ್ದರೂ, ಪಕ್ಷಾಂತರ ವಿರೋಧಿ ಕಾನೂನಿನ ಪರಿಣಾಮಗಳಿಂದ ಪಾರಾಗುವುದು ಅಷ್ಟು ಸುಲಭವಲ್ಲ. ಏಕೆಂದರೆ ಪಕ್ಷಾಂತರ ವಿರೋಧಿ ಕಾನೂನಿಗೆ ೨೦೦೩ರಲ್ಲಿ ಮಾಡಿರುವ ತಿದ್ದುಪಡಿಯಿಂದಾಗಿ ಪಕ್ಷ ವಿಭಜನೆಯನ್ನು ಸುಲಭವಾಗಿ ಕಾನೂನು ಮಾನ್ಯ ಮಾಡುವುದಿಲ್ಲ. ೨೦೦೩ರ ತನಕ ಮೂರನೇ ಎರಡರಷ್ಟು ಶಾಸಕರು ಪಕ್ಷ ಬಿಟ್ಟು ಹೊರ ನಡೆದು ತಮ್ಮದೇ ಗುಂಪು ರಚಿಸಬಹುದಿತ್ತು. ಆಗ ಪಕ್ಷಾಂತರ ವಿರೋಧಿ ಕಾನೂನು ಅನ್ವಯವಾಗುತ್ತಿರಲಿಲ್ಲ. ಆದರೆ ಬಳಿಕ ಕಾನೂನು ಮತ್ತಷ್ಟು ಬಿಗಿಯಾಗಿದೆ. ಈಗ ಶಿಂಧೆಯವರು ತಮ್ಮ ಬಣವೇ ಅಸಲಿ ಶಿವಸೇನಾ ಪಕ್ಷ ಎಂದು ದೃಢಪಡಿಸಬೇಕು. ಅಥವಾ ಮತ್ತೊಂದು ಪಕ್ಷದ ಜತೆ ವಿಲೀನವಾಗಬೇಕು. ತಿದ್ದುಪಡಿಯಾಗಿರುವ ಕಾನೂನು ಪಕ್ಷ ವಿಭಜನೆಯನ್ನು ಪರಿಗಣಿಸುವುದಿಲ್ಲ ಎನ್ನುತ್ತಾರೆ ಕೆಲ ಕಾನೂನು ತಜ್ಞರು.

” ಶಿವಸೇನಾದ ೫೫ ಶಾಸಕರ ಪೈಕಿ ೪೦ ಶಾಸಕರು ನನ್ನ ಜತೆಯಲ್ಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮೆಜಾರಿಟಿ ಮತ್ತು ಸಂಖ್ಯೆಗಳು ಪರಿಗಣನೆಯಾಗುತ್ತವೆ. ಹೀಗಾಗಿ ಯಾರೊಬ್ಬರೂ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ʼʼ ಎಂದು ಏಕನಾಥ್‌ ಶಿಂಧೆ ಹೇಳಿದ್ದಾರೆ.

ಮತ್ತೊಂದು ಕಡೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ” ನಾನು ಸಿಎಂ ಅಧಿಕೃತ ನಿವಾಸದಿಂದ ಹೊರನಡೆದಿರಬಹುದು. ಆದರೆ ಹೋರಾಟದ ಕೆಚ್ಚು ಬಿಟ್ಟಿಲ್ಲ ʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: ಶಿವ ಸೇನೆ ಚಿಹ್ನೆ ʼಬಿಲ್ಲು ಬಾಣʼ ಯಾರ ಬತ್ತಳಿಕೆಗೆ ಹೋಗಲಿದೆ?

Exit mobile version