ಮುಂಬಯಿ: ಕಾಂಗ್ರೆಸ್-ಎನ್‌ಸಿಪಿ ಜತೆಗಿನ ಮೈತ್ರಿಯನ್ನು ಮುರಿದುಕೊಳ್ಳಲು ತಾನು ಸಿದ್ಧ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಪ್ರಮುಖ ನಾಯಕ ಸಂಜಯ್ ರಾವತ್ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ ಅಘಾಡಿ ಸರಕಾರ ಪತನ ನಿಶ್ಚಿತವಾಗಿದೆ.
ಶಿವಸೇನೆಯು ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳಬೇಕು ಎನ್ನುವುದು ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡೆದ್ದಿರುವ ಶಾಸಕರ ಪ್ರಧಾನ ಬೇಡಿಕೆಯಾಗಿತ್ತು. ಇದೀಗ ಉದ್ಧವ್ ಠಾಕ್ರೆ ಅವರ ಗುಂಪು ಈ ಬೇಡಿಕೆಗೆ ಒಪ್ಪಿದಂತಾಗಿದೆ. ಈ ವಿಷಯವನ್ನು ಸ್ಪಷ್ಟಪಡಿಸಿರುವ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಅವರು ಮಿತ್ರ ಕೂಟದಿಂದ ಹೊರಬರಲು ಸಿದ್ಧ ಎಂದು ಪ್ರಕಟಿಸಿದ್ದಾರೆ. ಮತ್ತು ಗುವಾಹಟಿಯಲ್ಲಿರುವ ಎಲ್ಲ ಶಾಸಕರು ತಕ್ಷಣವೇ ಮರಳಿ ಬರಬೇಕು ಎಂದು ಮನವಿ ಮಾಡಿದ್ದಾರೆ.
ಶಿಂಧೆ ತ್ವರಿತ ಪ್ರತಿಕ್ರಿಯೆ
ರಾವತ್ ಅವರ ಹೇಳಿಕೆಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿದ ಏಕನಾಥ್ ಶಿಂಧೆ ಅವರು, ಮೊದಲು ಕಾಂಗ್ರೆಸ್-ಎನ್‌ಸಿಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳಿ. ಆಮೇಲೆ ನಾವು ಮಾತನಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಗುವಾಹಟಿಯಿಂದಲೇ ಅವರು ಹೇಳಿಕೆಯನ್ನು ನೀಡಿದ್ದಾರೆ.
ಕಾಂಗ್ರೆಸ್ ಕೂಡಾ ಮಾನಸಿಕವಾಗಿ ಸಿದ್ಧ
ಈ ನಡುವೆ, ಶಿವಸೇನೆಯಲ್ಲಿ ನಡೆಯುತ್ತಿರುವ ಹೊಸ ಬದಲಾವಣೆಗೆ ತನ್ನ ಸಮ್ಮತಿಯನ್ನು ಸೂಚಿಸುವಂತೆ ಕಾಂಗ್ರೆಸ್ ಮಾತನಾಡಿದೆ. ʻʻಒಂದೊಮ್ಮೆ ಶಿವಸೇನೆ ಬೇರೆಯವರ ಜತೆ ಸೇರಿ ಸರಕಾರ ರಚಿಸಲು ಮುಂದಾದರೆ ನಮ್ಮ ಅಭ್ಯಂತರವೇನೂ ಇಲ್ಲʼʼ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಾಟೋಳೆ ಹೇಳಿದ್ದಾರೆ. ʻʻಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ನಾವು ಶಿವಸೇನೆ ಜತೆ ಕೈಜೋಡಿಸಿದೆವು. ಈಗ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಬೆದರಿಕೆ ಹಾಕಿ ಬಂಡಾಯವನ್ನು ಸೃಷ್ಟಿಸಲಾಗಿದೆ. ಕಾಂಗ್ರೆಸ್ ಈಗಲೂ ವಿಶ್ವಾಸಮತ ಪರೀಕ್ಷೆಗೆ ಸಿದ್ಧವಿದೆ. ನಾವು ಮಹಾ ವಿಕಾಸ ಅಘಾಡಿ ಸರಕಾರದೊಂದಿಗೆ ಇದ್ದೇವೆ. ಒಂದು ವೇಳೆ ಅವರು ಬೇರೆ ಮೈತ್ರಿಕೂಟದೊಂದಿಗೆ ಹೋಗಲು ಬಯಸಿದರೆ ನಮ್ಮ ವಿರೋಧವೇನೂ ಇಲ್ಲʼʼ ಎಂದಿದ್ದಾರೆ ಅವರು.
ಮುಂದಿನ ಹೆಜ್ಜೆ ಏನು?
ಒಂದೊಮ್ಮೆ ಶಿವಸೇನೆಯ ಎರಡೂ ಬಣಗಳಿಗೆ ಈ ಪ್ರಸ್ತಾವನೆ ಒಪ್ಪಿತವಾದರೆ ಶಿವಸೇನೆ ಒಂದಾಗಿ ಉಳಿಯಲಿದೆ. ಮತ್ತು ಉದ್ಧವ್ ಠಾಕ್ರೆ ಅವರು ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಹೊಸ ಸರಕಾರ ರಚನೆಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ನಂತರ ಬಿಜೆಪಿ ನೇತೃತ್ವದಲ್ಲಿ ಸರಕಾರ ರಚನೆಯಾಗುತ್ತದೆಯೋ, ಶಿವಸೇನೆಗೆ ಬಿಜೆಪಿ ಬೆಂಬಲ ನೀಡುತ್ತದೋ ಎನ್ನುವುದನ್ನು ಕಾದು ನೋಡಬೇಕಾಗಿದೆ.