ಮುಂಬೈ: ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಜಾಹೀರಾತುಗಳನ್ನು ನಿರ್ಮಾಣ ಮಾಡುವುದು ಸಾಮಾನ್ಯ. ಈಗ ಮಾರುಕಟ್ಟೆಯಲ್ಲಿ ಸಿಕ್ಕಾಪಟೆ ಸ್ಪರ್ಧೆ ಇರುವ ಕಾರಣಕ್ಕೆ, ಕಂಪನಿಗಳು ತಮ್ಮ ಉತ್ಪನ್ನಗಳ ಕಡೆಗೆ ಜನರನ್ನು ಸೆಳೆಯಲು ಜಾಹೀರಾತಿನ ವಿಷಯದಲ್ಲೂ ಪೈಪೋಟಿಗೆ ಬೀಳುತ್ತವೆ. ನಮ್ಮ ಸಂಸ್ಥೆಯ ಉತ್ಪನ್ನಗಳ ಜಾಹೀರಾತು ಹೆಚ್ಚು ಕ್ರಿಯಾತ್ಮಕವಾಗಿರಬೇಕು-ಸೃಜನಾತ್ಮಕವಾಗಿರಬೇಕು, ಜನರನ್ನು ಸೆಳೆಯುವಂತಿರಬೇಕು ಎಂಬುದು ಪ್ರತಿ ಕಂಪನಿಯ ಮೊದಲ ಆದ್ಯತೆಯಾಗಿರುತ್ತದೆ. ಹೀಗಾಗಿ ವಿವಿಧ ಹೊಸತನವುಳ್ಳ ಪ್ರಯೋಗಗಳನ್ನು ಮಾಡುತ್ತವೆ. ಈ ಪ್ರಯತ್ನದಲ್ಲಿ ಕೆಲವು ಕಂಪನಿಗಳು ಯಶಸ್ವಿಯಾದರೆ, ಇನ್ನು ಕೆಲವಷ್ಟು ವಿಫಲಗೊಳ್ಳುತ್ತವೆ. ಮತ್ತೊಂದಷ್ಟು ಕಂಪನಿಗಳು ಏನೋ ಮಾಡಲು ಹೋಗಿ ಜನರ ಟೀಕೆಗೆ ಗುರಿಯಾಗುತ್ತವೆ. ಅಂಥವುಗಳ ಸಾಲಿಗೆ ಈಗ ಲೇಯರ್ ಆರ್ ಬ್ರಾಂಡ್‌ಗೆ ಸೇರಿದ ‘ಶಾಟ್ ಬಾಡಿ ಸ್ಪ್ರೇ (ಸುಗಂಧ ದ್ರವ್ಯ)’ ಜಾಹೀರಾತು (Shot Body Spray Ad) ಸೇರಿಕೊಂಡಿದೆ.
ಲೇಯರ್ ಆರ್ ಶಾಟ್ ಹೊಸತೇನೋ ಮಾಡಲು ಹೋಗಿ ವಿವಾದ ಸೃಷ್ಟಿಸಿದ್ದಲ್ಲದೆ, ಕೇಂದ್ರ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದೆ. ಇವರು ಶಾಟ್ ಡಿಯೋಡ್ರೆಂಟ್ ಪ್ರಚಾರಕ್ಕಾಗಿ ನಿರ್ಮಾಣ ಮಾಡಿದ್ದ ಎರಡೂ ಜಾಹೀರಾತುಗಳನ್ನು ಪ್ರಸಾರ ಮಾಡಬಾರದು. ಅವೆಲ್ಲವನ್ನೂ ತೆಗೆದುಹಾಕಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯೂಟ್ಯೂಬ್ ಮತ್ತು ಟ್ವಿಟರ್‌ಗೆ ಆದೇಶ ನೀಡಿದೆ. ಈ ಎರಡೂ ಜಾಹೀರಾತುಗಳನ್ನು ಅತ್ಯಂತ ಕೀಳಾಗಿ ಚಿತ್ರೀಕರಿಸಿಲಾಗಿದ್ದು, ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಿವೆ. ಸಭ್ಯತೆ ಮತ್ತು ನೈತಿಕತೆಯ ರೇಖೆ ಮೀರಿದ ಆ್ಯಡ್‌ಗಳಾಗಿದ್ದು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ)ದ 2021ನೇ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಸಂಪೂರ್ಣ ತನಿಖೆ ಮುಗಿಯುವವರೆಗೂ ಜಾಹೀರಾತುಗಳ ಪ್ರಸಾರ ಮಾಡುವಂತಿಲ್ಲ ಎಂದು ಯೂಟ್ಯೂಬ್ ಮತ್ತು ಟ್ವಿಟರ್‌ಗೆ ಸಚಿವಾಲಯದಿಂದ ಲಿಖಿತ ಆದೇಶ ಹೋಗಿದೆ ಎಂದು ಸರ್ಕಾರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಂದಹಾಗೇ, ಈ ವಿಷಯವನ್ನು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ(Advertising Standards Council of India-ASCI) ಸಮಗ್ರ ತನಿಖೆ ನಡೆಸಲಿದೆ.
ಜಾಹೀರಾತಿನಲ್ಲಿ ಏನಿದೆ?
ಮೊದಲ ಜಾಹೀರಾತಿನಲ್ಲಿ, ಯುವಕ-ಯುವತಿ ಬೆಡ್‌ರೂಮ್‌ನಲ್ಲಿ ಕುಳಿತಿರುತ್ತಾರೆ. ಆಗ ನಾಲ್ವರು ಯುವಕರು ಬಾಗಿಲನ್ನು ತಳ್ಳಿಕೊಂಡು ಅಲ್ಲಿಗೆ ಬರುತ್ತಾರೆ. ಅದರಲ್ಲೊಬ್ಬಾತ ಬೆಡ್ ಮೇಲೆ ಕುಳಿತಿದ್ದ ಯುವಕನ ಬಳಿ ʼನೀವು ಈಗಾಗಲೇ ಶಾಟ್ ತೆಗೆದುಕೊಂಡಿದ್ದೀರಿ ಎಂದು ಭಾಸವಾಗುತ್ತಿದೆʼ ಎನ್ನುತ್ತಾನೆ. ಆಗ ಆತ ʼಹೌದು ನಾನು ತೆಗೆದುಕೊಂಡಾಯ್ತುʼ ಎನ್ನುತ್ತಾನೆ. ಇವರಿಬ್ಬರ ಸಂಭಾಷಣೆಯನ್ನು ಕೇಳಿ ಯುವತಿ ತನ್ನ ಮುಖದಲ್ಲಿ ಭಯ ವ್ಯಕ್ತಪಡಿಸುತ್ತಾಳೆ. ಅಷ್ಟರಲ್ಲಿ ಮತ್ತೊಬ್ಬಾತ ತನ್ನ ಶರ್ಟ್ ತೋಳು ಮಡಿಸುತ್ತ, ಬೆಡ್‌ನಲ್ಲಿ ಕುಳಿತಿದ್ದ ಯುವತಿ ಹತ್ತಿರವೇ ಬಂದು ʼಹಾಗಿದ್ದರೆ ಈಗ ನಮ್ಮ ಸರದಿʼ ಎನ್ನುತ್ತಾನೆ. ಆತ ತನ್ನ ಮೇಲೆ ವಾಲುತ್ತಾನೆ ಎಂದು ಯುವತಿ ಭಯಗೊಳ್ಳುತ್ತಿರುವಾಗಲೇ ಆತ ಪಕ್ಕಕ್ಕೆ ಬಾಗಿ ಅಲ್ಲಿಯೇ ಟೇಬಲ್ ಮೇಲ ಇದ್ದ ʼಶಾಟ್ʼ ಡಿಯೋಡ್ರಂಟ್ ಬಾಟಲಿಯನ್ನು ಕೈಗೆತ್ತಿಕೊಳ್ಳುತ್ತಾನೆ.
ಎರಡನೇ ಜಾಹೀರಾತಿನಲ್ಲಿ, ಅದೊಂದು ಕಿರಾಣಿ ಶಾಪ್. ಅಂದರೆ ಮಾರ್ಟ್ ಇದ್ದಂತೆ. ಅಲ್ಲೊಬ್ಬಳು ಯುವತಿ ನಿಂತು ತನಗೆ ಬೇಕಾಗಿದ್ದನ್ನು ಏನೋ ಖರೀದಿಸುತ್ತ ಇರುತ್ತಾಳೆ. ಅವಳ ಹಿಂದೆಯೇ ನಾಲ್ಕೈದು ಯುವಕರು ಗುಂಪಾಗಿ ನಿಂತಿರುತ್ತಾರೆ. ಅದರಲ್ಲೊಬ್ಬ ʼನಾವು ನಾಲ್ಕು ಮಂದಿ ಇದ್ದೇವೆ, ಆದರೆ ಇಲ್ಲಿ ಒಂದೇ ಇದೆʼ ಎನ್ನುತ್ತಾನೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಇನ್ನೊಬ್ಬ, ʼಹಾಗಿದ್ದರೆ ಮೊದಲಿಗೆ ಯಾರು ಶಾಟ್ ತೆಗೆದುಕೊಳ್ಳೋಣʼ ಎಂದು ಪ್ರಶ್ನಿಸುತ್ತಾನೆ. ಈ ಸಂಭಾಷಣೆ ಅಲ್ಲಿಯೇ ಇದ್ದ ಯುವತಿಗೆ ಕೇಳಿ, ಆಕೆ ಭಯ-ಸಿಟ್ಟಿನಿಂದ ಹಿಂದಿರುಗಿ ಹುಡುಗರ ಕಡೆ ನೋಡುತ್ತಾಳೆ. ಆದರೆ ನಂತರ ಯುವಕರು ಅಲ್ಲಿಯೇ ಇದ್ದ ಲೇಯರ್ ಆರ್ ಶಾಟ್ ಡಿಯೋಡ್ರಂಟ್ ತೆಗೆದುಕೊಳ್ಳುತ್ತಾರೆ. ಆಗಲೇ ಗೊತ್ತಾಗುತ್ತದೆ ಅವರು ಮಾತನಾಡಿದ್ದು ಶಾಟ್ ಬಾಡಿ ಸ್ಪ್ರೇ ಬಗ್ಗೆ ಎಂದು..
ಇದನ್ನೂ ಓದಿ: ಬಾಲಿವುಡ್ ನ ಜನ ಮೆಚ್ಚಿದ ಗಾಯಕ ಕೆಕೆ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, 3,000 ಜಿಂಗಲ್ಸ್ ಹಾಡಿದ್ದರು!
ಎರಡೂ ಜಾಹೀರಾತುಗಳನ್ನು ನೋಡಿದ್ದೇ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಕಾರಣ ಇಲ್ಲಿ ʼಶಾಟ್ʼ ಎಂಬ ಪದವನ್ನು ಅಶ್ಲೀಲವಾಗಿಯೂ ಬಳಸಿಕೊಳ್ಳಲಾಗಿದೆ. ಇಷ್ಟೆಲ್ಲ ಡಬಲ್ ಮೀನಿಂಗ್‌ನಲ್ಲಿ ಜಾಹೀರಾತು ನಿರ್ಮಿಸಬೇಕಾ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ಆ್ಯಡ್‌ಗಳು ರೇಪ್ ಸಂಸ್ಕೃತಿಯನ್ನು ಉತ್ತೇಜಿಸುವಂಥವು. ಈಗಷ್ಟೇ ಹೈದರಾಬಾದ್ ಗ್ಯಾಂಗ್ ರೇಪ್ ನಡೆದಿದೆ. ಅದರ ಮಧ್ಯೆ ಹೀಗೆಲ್ಲ ಜಾಹೀರಾತು ನಿರ್ಮಿಸಿ ಮತ್ತಷ್ಟು ಪ್ರಚೋದನೆ ಮಾಡುತ್ತಿವೆ. ಅಷ್ಟಕ್ಕೂ ಇಂಥ ಆ್ಯಡ್‌ಗಳಿಗೆ ಅನುಮೋದನೆಯಾದರೂ ಹೇಗೆ ಸಿಗುತ್ತದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.
ಜಾಹೀರಾತು ಪ್ರಸಾರವಾದ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಟ್ವೀಟ್ ಮಾಡಿ, ಪುರುಷರು, ಮಹಿಳೆಯರು ಮತ್ತು ಒಟ್ಟಾರೆ ಇಡೀ ಸಮಾಜದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುವ ರೀತಿಯಲ್ಲಿ ಈ ಆ್ಯಡ್ ನಿರ್ಮಿಸಲಾಗಿದೆ. ನಾನು ಈ ವಿಷಯವನ್ನು ದೆಹಲಿ ಪೊಲೀಸ್ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಎದುರು ಇಡುತ್ತೇನೆ ಎಂದು ಹೇಳಿದ್ದರು.
ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಹೈದರಾಬಾದ್‌ನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ಆಗಿದೆ. ಇಂಥ ಕೇಸ್‌ಗಳು ಪ್ರತಿನಿತ್ಯ ವರದಿಯಾಗುತ್ತಿವೆ. ಆದರೆ ಲೇಯರ್ ಆರ್ ಶಾಟ್‌ನಂಥ ಕಂಪನಿಗಳು ರೇಪ್ ಪ್ರಚೋದಕ ವಿಷಯಗಳನ್ನು ಜೋಕ್ ಆಗಿ ಬಳಸಿಕೊಂಡು ಜಾಹೀರಾತು ನಿರ್ಮಿಸುತ್ತಿವೆ. ಇದು ಕ್ರಿಮಿನಲ್ ಅಷ್ಟೇ ಅಲ್ಲ, ನಾಚಿಕೆಗೇಡು ಎಂದಿದ್ದರು.
ಇದನ್ನೂ ಓದಿ: Sarkaru Vaari Paata : ಸಿನಿಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಮಹೇಶ್ ಬಾಬು