ಮುಂಬೈ: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ (Mahadev App Case) ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ಅವರಿಗೂ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ನೀಡಿದೆ. ಇದರಿಂದಾಗಿ ನಟಿಗೂ ಸಂಕಷ್ಟ ಎದುರಾದಂತಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಾಸ್ಯ ಕಲಾವಿದ ಕಪಿಲ್ ಶರ್ಮಾ, ನಟಿಯರಾದ ಹುಮಾ ಖುರೇಷಿ, ಹೀನಾ ಖಾನ್ ಹಾಗೂ ನಟ ರಣಬೀರ್ ಕಪೂರ್ ಅವರಿಗೆ ಇ.ಡಿ ಸಮನ್ಸ್ ನೀಡಿದೆ.
ಇ.ಡಿ ಸಮನ್ಸ್ ಹಿನ್ನೆಲೆಯಲ್ಲಿ ಶ್ರದ್ಧಾ ಕಪೂರ್ ಅವರು ಶುಕ್ರವಾರವೇ (ಅಕ್ಟೋಬರ್ 6) ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ನಟ ರಣಬೀರ್ ಕಪೂರ್ ಅವರು ಎರಡು ವಾರ ಸಮಯ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಣಬೀರ್ ಕಪೂರ್ ಅವರು ಬೆಟ್ಟಿಂಗ್ ಆ್ಯಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಪರಾಧದಿಂದ ಲಭಿಸಿದ ಹಣವನ್ನು ರಣಬೀರ್ ಕಪೂರ್ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಏನಿದು ಪ್ರಕರಣ?
ಅಪರಾಧದ ಆದಾಯದಿಂದ ಹಲವರಿಗೆ ದೊಡ್ಡ ಮೊತ್ತದ ಹಣವನ್ನು ವಿನಿಮಯವಾಗಿ ನೀಡಲಾಗಿದೆ ಎಂದು ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ. ಆ್ಯಪ್ ಪ್ರವರ್ತಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಳ್ ಅವರು ಸಾಕಷ್ಟು ಬಾಲಿವುಡ್ ನಟ, ನಟಿಯರಿಗೆ ತಮ್ಮ ಆ್ಯಪ್ ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಸಂದಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಯುಎಇನಲ್ಲಿ ನಡೆದ ಚಂದ್ರಕರ್ ಮದುವೆಗೆ ಬಾಲಿವುಡ್‌ನ ಘಟಾನುಘಟಿಗಳೆಲ್ಲರೂ ಪಾಲ್ಗೊಂಡಿದ್ದರು. ಈ ಮದುವೆಯ ಒಟ್ಟು ವೆಚ್ಚ 200 ಕೋಟಿ ರೂಪಾಯಿಯನ್ನು ನಗದಿನಲ್ಲಿ ಪಾವತಿಸಲಾಗಿತ್ತು.
ಇದನ್ನೂ ಓದಿ: Mahadev App Case: ಕಪಿಲ್ ಶರ್ಮಾ, ಹುಮಾ ಖುರೇಷಿ, ಹಿನಾ ಖಾನ್‌ಗೆ ಎದುರಾಯ್ತು ಸಂಕಷ್ಟ! ಇಡಿಯಿಂದ ಸಮನ್ಸ್
ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ಹೊಸ ಬಳಕೆದಾರರನ್ನು ದಾಖಲಿಸಲು, ಬಳಕೆದಾರರ ಐಡಿಗಳನ್ನು ರಚಿಸಲು ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಕಳುಹಿಸುವ, ಇದಕ್ಕಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ವ್ಯವಸ್ಥೆಗೊಳಿಸುವ ಒಂದು ಸಿಂಡಿಕೇಟ್ ಆಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ತಿಂಗಳು ಮುಂಬೈ, ಕೋಲ್ಕೊತಾ ಹಾಗೂ ಭೋಪಾಲ್‌ನಲ್ಲಿ ನಡೆದ ದಾಳಿಯ ವೇಳೆ 417 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿತ್ತು.