ನವ ದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದ ತನಿಖಾಧಿಕಾರಿಗಳಿಗೆ ಮಹತ್ವದ ಎಳೆಯೊಂದು ಸಿಕ್ಕಿದೆ. ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿದ್ದ ಎಲುಬುಗಳು ಶ್ರದ್ಧಾಳದ್ದೇ ಎಂದು ದೃಢಪಟ್ಟಿದೆ. ದೆಹಲಿಯಲ್ಲಿ ಅಫ್ತಾಬ್ ಎಂಬಾತ ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದಿದ್ದಲ್ಲದೆ, 35 ತುಂಡುಗಳಾಗಿ ಮಾಡಿ ಫ್ರಿಜ್ನಲ್ಲಿಟ್ಟುಕೊಂಡು, ಅದನ್ನು ಮೆಹ್ರೌಲಿ ಅರಣ್ಯದ ವಿವಿಧೆಡೆ ಎಸೆದಿದ್ದ. ಇದು 2022ರ ಮೇ ತಿಂಗಳಲ್ಲಿ ನಡೆದ ಕೊಲೆಯಾಗಿದ್ದು, ಈಗ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೆಹ್ರೌಲಿ ಅರಣ್ಯವನ್ನೆಲ್ಲ ಹುಡುಕಿದಾಗ ಅವರಿಗೆ ಎಲುಬುಗಳು ಸಿಕ್ಕಿವೆ. ತಲೆ ಬುರುಡೆಯೂ ಪತ್ತೆಯಾಗಿತ್ತು. ಇವನ್ನೆಲ್ಲ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದೀಗ ಪರೀಕ್ಷಾ ವರದಿ ಬಂದಿದೆ. ‘ಶ್ರದ್ಧಾಳ ತಂದೆ ವಿಕಾಸ್ ವಾಳ್ಕರ್ ಮತ್ತು ಆಕೆಯ ಸೋದರನ ಡಿಎನ್ಎ ಮಾದರಿ ಈ ಎಲುಬುಗಳೊಂದಿಗೆ ಹೊಂದಾಣಿಕೆಯಾಗುತ್ತಿದೆ’ ಎಂದು ವರದಿಯಲ್ಲಿ ದೃಢಪಟ್ಟಿದೆ.
ಆರೋಪಿ ಅಫ್ತಾಬ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ಹಲವು ಮಾದರಿಯ ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಅವನಿಗೆ ಪಾಲಿಗ್ರಾಫ್ ಟೆಸ್ಟ್ ಮತ್ತು ಮಂಪರು ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಆತ ತಾನೇ ಶ್ರದ್ಧಾಳ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಹಾಗೇ, ತಾನು ಶ್ರದ್ಧಾಳನ್ನು ಹತ್ಯೆ ಮಾಡಲು ಬಳಸಿದ ಶಸ್ತ್ರ ಯಾವುದು? ಅವುಗಳನ್ನು ಎಲ್ಲಿಟ್ಟಿದ್ದೇನೆ? ಶ್ರದ್ಧಾಳ ದೇಹದ ತುಂಡುಗಳನ್ನು ಎಲ್ಲಿ ಎಸೆದೆ-ಎಂಬಿತ್ಯಾದಿ ಮಾಹಿತಿಗಳನ್ನು ಹೇಳಿಕೊಂಡಿದ್ದ. ಇದೀಗ ಡಿಎನ್ಎ ಪರೀಕ್ಷೆಯಲ್ಲಿ ಆ ಎಲುಬುಗಳೆಲ್ಲ ಶ್ರದ್ಧಾಳದ್ದೇ ಎಂಬುದು ದೃಢಪಟ್ಟಿದ್ದು, ತನಿಖೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ.
ಇದನ್ನೂ ಓದಿ: Shraddha Murder Case | ಪೊಲೀಸರು ಸಹಕಾರ ನೀಡಿದ್ದರೆ ಮಗಳು ಬದುಕುತ್ತಿದ್ದಳು, ಶ್ರದ್ಧಾ ತಂದೆ ಗಂಭೀರ ಆರೋಪ