ಮುಂಬಯಿ: ಶ್ರದ್ಧಾ ವಾಳ್ಕರ್ ಆಕೆಯ ಲಿವ್ ಇನ್ ಸಂಗಾತಿ ಅಫ್ತಾಬ್ನಿಂದಲೇ ಹತ್ಯೆಯಾಗಿ, 35 ತುಂಡುಗಳಾಗಿ ಹೋಗಿದ್ದಾಳೆ. 2022ರ ಮೇ 18ರಂದು ಈಕೆಯ ಕೊಲೆಯಾಗಿದ್ದರೂ, ಅದು ಈಗೊಂದು ಎಂಟು ದಿನಗಳ ಹಿಂದೆ ಬೆಳಕಿಗೆ ಬಂದಿದೆ. ಶ್ರದ್ಧಾಳ ತಲೆ ಭಾಗ ಪತ್ತೆಯಾಗಿದ್ದು, ತನಿಖೆಯೂ ವೇಗವಾಗಿ ನಡೆಯುತ್ತಿದೆ. ಇನ್ನು ಶ್ರದ್ಧಾ ಮತ್ತು ಅಫ್ತಾಬ್ ನಡುವೆ ಪದೇಪದೆ ಜಗಳವಾಗುತ್ತಿತ್ತು. 2020ರಲ್ಲೂ ಒಮ್ಮೆ ಶ್ರದ್ಧಾ ಮೇಲೆ ಅಫ್ತಾಬ್ ಭಯಾನಕವಾಗಿ ಹಲ್ಲೆ ಮಾಡಿದ್ದ ಎಂಬ ವಿಷಯ ಈಗಾಗಲೇ ಬೆಳಕಿಗೆ ಬಂದಿದೆ.
ಆಗ 2020ರಲ್ಲಿ ಅಫ್ತಾಬ್ ಹಲ್ಲೆ ಮಾಡಿದ ಸಂದರ್ಭದಲ್ಲಿ ಶ್ರದ್ಧಾ ವಾಳ್ಕರ್ ಪೊಲೀಸರಿಗೆ ದೂರು ಕೊಟ್ಟು ಬರೆದ ಪತ್ರವೂ ಈಗ ಸಿಕ್ಕಿದೆ. 2020ರಲ್ಲಿ ಶ್ರದ್ಧಾ ಮಹಾರಾಷ್ಟ್ರದ ವಸೈನಲ್ಲಿ ಇದ್ದರು. ಆಗ ಆಕೆ ಮೇಲೆ ಅಫ್ತಾಬ್ ಹಲ್ಲೆ ನಡೆಸಿದ್ದ. ಅಂದು ಶ್ರದ್ಧಾಳೊಂದಿಗೆ ದೂರು ಕೊಡಲು ತುಲಿಂಜ್ ಪೊಲೀಸ್ ಸ್ಟೇಶನ್ಗೆ ಹೋಗಿದ್ದ ಆಕೆಯ ನೆರೆಮನೆಯವರು ಈಗ ಪತ್ರವನ್ನು ಮಹಾರಾಷ್ಟ್ರ ಪೊಲೀಸರಿಗೆ ನೀಡಿದ್ದಾರೆ. ಅದು 2020ರ ನವೆಂಬರ್ 23ರಂದು ಶ್ರದ್ಧಾಳೇ ಬರೆದು, ತುಲಿಂಜ್ ಪೊಲೀಸ್ ಸ್ಟೇಶನ್ಗೆ ಕೊಟ್ಟ ದೂರಿನ ಪತ್ರ ಎಂಬುದನ್ನೂ ಮಹಾರಾಷ್ಟ್ರ ಪೊಲೀಸರು ಈಗ ದೃಢಪಡಿಸಿದ್ದಾರೆ.
2020ರ ನವೆಂಬರ್ 23ರಂದು ಶ್ರದ್ಧಾ ಬರೆದಿದ್ದ ಪತ್ರದಲ್ಲಿ ಏನಿದೆ?
‘ಕಳೆದ ಆರು ತಿಂಗಳಿಂದಲೂ ಅಫ್ತಾಬ್ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಪೊಲೀಸರ ಬಳಿ ಹೋದರೆ ಕೊಲ್ಲುತ್ತೇನೆ ಎಂದು ಹೇಳಿದ್ದಾನೆ. ಹೀಗಾಗಿ ಠಾಣೆಗೆ ಹೋಗಿ ದೂರು ಕೊಡಲೂ ನನಗೆ ಸಾಧ್ಯವಾಗಲಿಲ್ಲ. ಅಫ್ತಾಬ್ ಈಗ ಮಹಾರಾಷ್ಟ್ರದ ವಿಜಯ ವಿಹಾರ ಕಾಂಪ್ಲೆಕ್ಸ್ನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾನೆ. ನಿರಂತರವಾಗಿ ನನ್ನನ್ನು ನಿಂದಿಸುತ್ತ, ಹೊಡೆಯುತ್ತಿದ್ದಾನೆ. ಇಂದು (2020ರ ನವೆಂಬರ್ 23) ಕೂಡ ನನ್ನನ್ನು ಉಸಿರುಗಟ್ಟಿಸಲು ಪ್ರಯತ್ನಿಸಿದ. ಮಾತೆತ್ತಿದರೆ ಕೊಲ್ಲುತ್ತೇನೆ, ಪೀಸ್ಪೀಸ್ ಆಗಿ ಕತ್ತರಿಸುತ್ತೇನೆ ಎಂದು ಬೆದರಿಕೆಯೊಡ್ಡುತ್ತಿದ್ದಾನೆ.
ಆತ ನನಗೆ ಥಳಿಸುತ್ತಾನೆ, ಕೊಲ್ಲಲೂ ಹೇಸುವುದಿಲ್ಲ ಎಂಬುದು ಅಫ್ತಾಬ್ ಪೂನಾವಾಲಾ ಪಾಲಕರಿಗೂ ಗೊತ್ತಿದೆ. ನಾವಿಬ್ಬರೂ ಒಟ್ಟಿಗೇ ವಾಸ ಮಾಡುತ್ತಿರುವುದು ಅವರಿಗೆ ಗೊತ್ತು ಮತ್ತು ವಾರಾಂತ್ಯದಲ್ಲಿ ನಾವಿದ್ದಲ್ಲಿ ಬಂದು ಹೋಗುತ್ತಿರುತ್ತಾರೆ. ಅಫ್ತಾಬ್ ಮತ್ತು ನಾನು ಮದುವೆ ಆಗುವವರೆಗೂ ಅವನೊಂದಿಗೇ ಇರಲು ನಾನು ನಿರ್ಧರಿಸಿದ್ದೆ. ಆದರೆ ಇನ್ನು ಅವನೊಂದಿಗೆ ನಾನು ಇರುವುದಿಲ್ಲ. ಆದರೆ ಅವನು ಈಗಾಗಲೇ ಅನೇಕ ಬಾರಿ ಕೊಲೆ ಬೆದರಿಕೆ ಹಾಕಿದ್ದಾನೆ. ಹಾಗಾಗಿ ಅವನಿಂದ ನನಗೆ ಏನೇ ತೊಂದರೆ, ಅಪಾಯವಾದರೂ ಇದೇ ಲೆಟರ್ನ್ನೇ ದೂರು ಎಂದು ಪರಿಗಣಿಸಬೇಕು’ ಎಂಬುದು ಎರಡು ವರ್ಷಗಳ ಹಿಂದೆ ಶ್ರದ್ಧಾ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ.
2020ರಿಂದಲೂ ಆತ ಶ್ರದ್ಧಾಳಿಗೆ ಎಷ್ಟು ತೊಂದರೆ ಕೊಡುತ್ತಿದ್ದ ಎಂಬುದಕ್ಕೆ ಈ ಪತ್ರಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಅಂತೂ ಕೊನೆಗೂ ಆತ ಹೇಳಿದಂತೆ ಮಾಡಿದ್ದಾನೆ. ಮಹಾರಾಷ್ಟ್ರದಿಂದ ದೆಹಲಿಗೆ ಬಂದು, ದೆಹಲಿ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗಿದ್ದರು. ಆದರೆ ಅವನು ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದು, ಪೀಸ್ಪೀಸ್ ಮಾಡಿಯೇ, ಎಸೆದಿದ್ದಾನೆ. ಸದ್ಯ ಈ ಪತ್ರದ ಬಗ್ಗೆ ಆಗ ಪೊಲೀಸರು ಯಾವ ಕ್ರಮ ಕೈಗೊಂಡಿದ್ದರು ಎಂಬುದರ ತನಿಖೆಯನ್ನೂ ದೆಹಲಿ ಪೊಲೀಸರು ಶುರು ಮಾಡಿದ್ದಾರೆ.
ಇದನ್ನೂ ಓದಿ: Shraddha Murder Case | ಜಗಳದ ಸಿಟ್ಟಿನ ಗಳಿಗೆಯಲ್ಲಿ ಶ್ರದ್ಧಾಳನ್ನು ಕೊಂದೆ ಎಂದ ಅಫ್ತಾಬ್