Site icon Vistara News

Lord Ram: ಮದರಸಾಗಳಲ್ಲೂ ನಡೆಯಲಿದೆ ಇನ್ನು ರಾಮನ ಕುರಿತು ಅಧ್ಯಯನ; ಏನಿದು ಯೋಜನೆ?

Madrasa

Shri Ram’s story to be taught in Uttarakhand’s madrasas: Waqf Board chairman

ಡೆಹ್ರಾಡೂನ್:‌ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೊಂಡಿದೆ. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ದೇಶಾದ್ಯಂತ ಈಗ ರಾಮನ ಜಪವೇ ಶುರುವಾಗಿದೆ. ಇದರ ಬೆನ್ನಲ್ಲೇ, ಉತ್ತರಾಖಂಡದ ಮದರಸಾಗಳಲ್ಲೂ (Uttarakhand Madrasa) ಶ್ರೀರಾಮನ (Lord Ram) ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

ಹೌದು, ಈ ಕುರಿತು ಉತ್ತರಾಖಂಡ ವಕ್ಫ್‌ ಬೋರ್ಡ್‌ ಚೇರ್ಮನ್‌ ಆಗಿರುವ ಶಾದಾಬ್‌ ಶಾಮ್ಸ್‌ ಅವರೇ ಮಾಹಿತಿ ನೀಡಿದ್ದಾರೆ. “ಮದ್ರಸಾ ಆಧುನೀಕರಣ ಯೋಜನೆಯ ಭಾಗವಾಗಿ ಇನ್ನು ಮುಂದೆ ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಮಾರ್ಚ್‌ನಿಂದ ಮುಸ್ಲಿಂ ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದರ ಜತೆಗೆ ಶ್ರೀರಾಮನ ಕುರಿತು ಕೂಡ ಅಧ್ಯಯನ ಮಾಡಲಿದ್ದಾರೆ” ಎಂದು ತಿಳಿಸಿದ್ದಾರೆ. ಇದು ಧಾರ್ಮಿಕ ಸೌಹಾರ್ದತೆಯ ಸಂಕೇತವೂ ಆಗಿದೆ ಎನ್ನಲಾಗುತ್ತಿದೆ.

Ram Navami 2023

ಶಾದಾಬ್‌ ಶಾಮ್ಸ್‌ ಅವರು ಬಿಜೆಪಿ ಮುಖಂಡರೂ ಆಗಿದ್ದು, ಅವರು ಮದರಸಾಗಳಲ್ಲಿ ಬೋಧನೆ ಮಾಡುವ ಮೌಲ್ವಿಗಳನ್ನೂ ಒಪ್ಪಿಸಿದ್ದಾರೆ. ಧರ್ಮ, ಜಾತಿಯ ಸಂಕೋಲೆಗಳು ಇಲ್ಲದೆಯೇ ರಾಮನನ್ನು ಆರಾಧಿಸಬಹುದು. ಆತನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಮನೋಭಾವದಿಂದ ಶಾದಾಬ್‌ ಶಾಮ್ಸ್‌ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಉತ್ತರಾಖಂಡದ ವಕ್ಫ್‌ ಬೋರ್ಡ್‌ ವ್ಯಾಪ್ತಿಗೆ ಸುಮಾರು 117 ಮದರಸಾಗಳು ಬರುತ್ತವೆ. ಡೆಹ್ರಾಡೂನ್, ಹರಿದ್ವಾರ, ಉಧಾಮ್‌ ಸಿಂಗ್‌ ನಗರ ಹಾಗೂ ನೈನಿತಾಲ್‌ ಜಿಲ್ಲೆ ಸೇರಿ ಹಲವೆಡೆ ವಕ್ಫ್‌ ಬೋರ್ಡ್‌ ವ್ಯಾಪ್ತಿಯ ಮದರಸಾಗಳಲ್ಲಿ ರಾಮನ ಕುರಿತ ಅಧ್ಯಾಯಗಳನ್ನು ಸೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Ram Mandir: ರಾಮಮಂದಿರದ ಮೇಲೆ ಪಾಕಿಸ್ತಾನ ಧ್ವಜ; ಮುಸ್ಲಿಂ ಯುವಕನಿಂದ ಆಕ್ಷೇಪಾರ್ಹ ಪೋಸ್ಟ್

ರಾಮಮಂದಿರವು ಭಕ್ತರ ದರ್ಶನಕ್ಕೆ ಮುಕ್ತವಾದ ಜನವರಿ 23ರಂದು ಬರೋಬ್ಬರಿ 5 ಲಕ್ಷ ಜನ ದರ್ಶನ ಪಡೆದಿದ್ದಾರೆ ಹಾಗೂ ಒಂದೇ ದಿನದಲ್ಲಿ 3.17 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ರಾಮಮಂದಿರ ಟ್ರಸ್ಟ್‌ ಮಾಹಿತಿ ನೀಡಿದೆ. “ಪ್ರಾಣ ಪ್ರತಿಷ್ಠೆ ನಂತರ ಸಾರ್ವಜನಿಕರಿಗೆ ರಾಮಮಂದಿರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸುಮಾರು 10 ದೇಣಿಗೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಮೊದಲ ದಿನ ಸುಮಾರು 5 ಲಕ್ಷಕ್ಕೂ ಅಧಿಕ ಜನ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಮೊದಲ ದಿನವೇ ನಗದು ಹಾಗೂ ಆನ್‌ಲೈನ್‌ ಮೂಲಕ ಒಟ್ಟು 3.17 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ” ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿ ಅನಿಲ್‌ ಮಿಶ್ರಾ ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version