Site icon Vistara News

Kerala High Court | ಪ್ರತಿ ಮುಸಲ್ಮಾನರ ಮನೆ ಮುಂದೆ ಮಸೀದಿ ನಿರ್ಮಿಸುತ್ತ ಹೋದರೆ ಹೇಗೆ? ಕೇರಳ ಹೈಕೋರ್ಟ್ ಗರಂ

Kerala High Court

ಕೊಚ್ಚಿ: ಪ್ರಾರ್ಥನಾ ಮಂದಿರಗಳು, ಧಾರ್ಮಿಕ ಕೇಂದ್ರಗಳ ಬಗ್ಗೆ ಕೇರಳ ಹೈಕೋರ್ಟ್ ಮಹತ್ವದ ಆದೇಶವನ್ನು ಮಾಡಿದೆ. ”ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಂದ ಒಪ್ಪಿಗೆ ಪಡೆಯದ ಪ್ರಾರ್ಥನಾ ಮಂದಿರಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಮುಚ್ಚಬೇಕು” ಎಂದು ಕೇರಳ ಹೈಕೋರ್ಟ್ (Kerala High Court) ಸರ್ಕಾರಕ್ಕೆ ಖಡಕ್ಕಾಗಿ ಸೂಚಿಸಿದೆ.

ವಾಣಿಜ್ಯ ಕಟ್ಟಡವೊಂದನ್ನು ಮಸೀದಿಯನ್ನಾಗಿ ಪರಿವರ್ತಿಸಲು ಅನುಮತಿ ನೀಡುವಂತೆ ಮಳಪ್ಪುರಮ್‌ನ ನಿಲಂಬುರ್‌ನ ನೂರುಲ್ ಇಸ್ಲಾಮ್ ಸಂಸ್ಕಾರಿಕಾ ಸಂಘಮ್ ಅರ್ಜಿ ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ನ ಜಸ್ಟೀಸ್ ಪಿ ವಿ ಕುನ್ಹಿಕೃಷ್ಣನ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ದೇವರು ಎಲ್ಲೆಡೆ ಇದ್ದಾನೆ. ಒಂದು ವೇಳೆ ಮುಸ್ಲಿಮ್ ಸಮುದಾಯವು ಮಸೀದಿಯಲ್ಲೇ ಪ್ರಾರ್ಥನೆ ಸಲ್ಲಿಸಬೇಕಿದ್ದರೆ ಹತ್ತಿರದಲ್ಲಿರುವ ಮಸೀದಿಗಳಿಗೆ ಹೋಗಲಿ. ಅದನ್ನು ಬಿಟ್ಟು ತಮ್ಮ ಮನೆಯ ಹತ್ತಿರದಲ್ಲೇ ಹೊಸ ಮಸೀದಿಯನ್ನು ಏಕೆ ನಿರ್ಮಿಸಬೇಕು ಎಂದು ಕೇಳಿದ್ದಾರೆ.

ಈಗ ಕಮರ್ಷಿಯಲ್ ಬಿಲ್ಡಿಂಗ್ ಇರುವ ಸ್ಥಳದಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ 36 ಮಸೀದಿಗಳಿವೆ. ಹೀಗಿದ್ದಾಗ್ಯೂ ಮತ್ತೊಂದು ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಹೀಗೆ ಪ್ರತಿ ಮುಸಲ್ಮಾನರ ಮನೆಯ ಸಮೀಪವೇ ಮಸೀದಿಗಳನ್ನು ನಿರ್ಮಿಸುತ್ತಾ ಹೋದರೆ, ರಾಜ್ಯದ ಪ್ರತಿ ಮೂಲೆ ಮೂಲೆಗಳಲ್ಲಿ ಮಸೀದಿಗಳನ್ನು ಕಾಣಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಮುಖ್ಯ ಕಾರ್ಯದರ್ಶಿ, ಪೊಲೀಸರಿಗೆ ನೋಟಿಸ್
ಕೇರಳ ಹೈಕೋರ್ಟ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರು ಹಾಗೂ ಸಂಬಂಧಿಸಿದ ಎಲ್ಲರಿಗೂ ನೋಟಿಸ್ ಜಾರಿ ಮಾಡಿದೆ. ಯಾವುದೇ ಧಾರ್ಮಿಕ ಕೇಂದ್ರಗಳು ಮತ್ತು ಪ್ರಾರ್ಥನಾ ಮಂದಿರಗಳು ಅನುಮತಿ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದರೆ ಅಂಥವುಗಳನ್ನು ಗುರುತಿಸುವಂತೆ ಸೂಚಿಸಿದೆ. ಒಂದು ವೇಳೆ, ಅಕ್ರಮ ಧಾರ್ಮಿಕ ಕೇಂದ್ರಗಳು ಮತ್ತು ಪ್ರಾರ್ಥನಾ ಮಂದಿರಗಳು ಕಂಡು ಬಂದರೆ ಅಗತ್ಯ ಕ್ರಮಗಳನ್ನು ಕೈಗೊಳ್ಳವಂತೆ ಅಧಿಕಾರಿಗಳಿಗೆ ಹೈಕೋರ್ಟ್ ಸೂಚಿಸಿದೆ.

ಮುಸ್ಲಿಮರಿಗಿಂತ ಹಿಂದುಗಳು, ಕ್ರೈಸ್ತರೇ ಹೆಚ್ಚು
ಮಸೀದಿ ನಿರ್ಮಿಸಲು ಉದ್ದೇಶಿರುವ ಸ್ಥಳದ ಸುತ್ತಮುತ್ತ ಮುಸ್ಲಿಮ್‌ರಗಿಂತ ಹಿಂದು-ಕ್ರೈಸ್ತ್ ಕುಟುಂಬಗಳೇ ಹೆಚ್ಚು. ಈ ಪ್ರದೇಶದಲ್ಲಿ 3,999 ಮುಸ್ಲಿಮ್ ಕುಟುಂಬಗಳಿದ್ದರೆ, 4662 ಹಿಂದು ಮತ್ತು ಕ್ರೈಸ್ತರ ಕುಟುಂಬಗಳ ಕುಟುಂಬಗಳಿವೆ. ಮತ್ತೊಂದೆಡೆ, ಕೇರಳದಲ್ಲಿ ಹಾಸ್ಟಿಟಲ್‌ಗಳಿಗಿಂತಲೂ ಧಾರ್ಮಿಕ ಕೇಂದ್ರಗಳೇ ಹೆಚ್ಚಾಗಿವೆ. ಕೇರಳದಲ್ಲಿ ಹಾಸ್ಪಿಟಲ್‌ಗಳಿಗಿಂತಲೂ ಮೂರುವರೆ ಪಟ್ಟು ಹೆಚ್ಚು ನಾನಾ ಧಾರ್ಮಿಕ ಪೂಜಾ ಕೇಂದ್ರಗಳಿವೆ. ಒಂದು ವೇಳೆ, ಯಾವುದೇ ಮಾರ್ಗದರ್ಶಿ ಸೂತ್ರವನ್ನು ಪಾಲಿಸದೇ ಹೀಗೆಯೇ ಧಾರ್ಮಿಕ ಕೇಂದ್ರಗಳಿಗೆ ಅನುಮತಿ ನೀಡುತ್ತಾ ಹೋದರೆ, ಜನರಿಗೆ ವಾಸಿಸಲು ಜಾಗವೇ ಇರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇದನ್ನು ಓದಿ | ನಂಬಿಕೆ ಇರುವ ಅನ್ಯಧರ್ಮೀಯರ ದೇವಸ್ಥಾನ ಪ್ರವೇಶವನ್ನು ತಡೆಯಲು ಆಗದು ಎಂದ ಮದ್ರಾಸ್‌ ಹೈಕೋರ್ಟ್‌

Exit mobile version