Site icon Vistara News

ಮಿಸ್ತ್ರಿ ಸಾವಿನ ಭವಿಷ್ಯ ಹೇಳಿದ್ದ ಸ್ವಾಮೀಜಿ?: Almost ಸರಿಯಾಯ್ತು, ಆದ್ರೆ ಸ್ವಲ್ಪ ಎಡಿಟ್‌ ಆಯ್ತು!

Siddalinga Shivacharya swamiji

ಬೆಂಗಳೂರು: ಟಾಟಾ ಸನ್ಸ್‌ ಸಂಸ್ಥೆಯ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ (54) (Cyrus Mistry) ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಿಂದ ಮುಂಬೈಗೆ ಮರ್ಸಿಡೀಸ್ ಕಾರ್‌ನಲ್ಲಿ ತೆರಳುತ್ತಿದ್ದಾಗ ಪಾಲ್ಘರ್‌ನಲ್ಲಿ ಅಪಘಾತ ಸಂಭವಿಸಿದೆ. ಈ ಕುರಿತು ಕರ್ನಾಟಕದ ಸ್ವಾಮೀಜಿಯೊಬ್ಬರು ನುಡಿದಿದ್ದ ಭವಿಷ್ಯ ಈಗ ವೈರಲ್‌ ಆಗುತ್ತಿದೆ.

ರಾಜ್ಯ ರಾಜಕೀಯದ ಕುರಿತು ಇತ್ತೀಚೆಗೆ ಭವಿಷ್ಯ ಹೇಳುವವರಲ್ಲಿ ಮುಂಚೂಣಿಯಲ್ಲಿರುವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಈ ಕುರಿತು ಕುರುಹು ನೀಡಿದ್ದರು. ಆಗಸ್ಟ್‌ 27ರಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಕುರಿತು ಹೀಗೆ ಬರೆದಿದ್ದರು ಎಂದು ಪೋಸ್ಟ್‌ ಹರಿದಾಡುತ್ತಿದೆ.

ಸ್ವಾಮೀಜಿ ಫೇಸ್‌ ಬುಕ್‌ನಲ್ಲಿ ಬರೆದ ಬರಹ ಹೀಗಿತ್ತು: “ನಮ್ಮ ದೇಶದ ಉದ್ಯಮಿಗಾರರಾದ ಟಾಟಾ ವಂಶಸ್ತರ ಹಿರಿಯರಿಗೆ ಕಂಟಕ ಎದುರಾಗುತದೆ,ಅಧ್ಯಕ್ಷರು ಹಾಲಿ ಅಥವಾ ಮಾಜಿ ಅಧ್ಯಕ್ಷರ ದುರ್ಮರಣ ….ನಂತರ ದಿನಗಳಲ್ಲಿ ಕಂಪನಿಯ ವ್ಯವಹಾರಕ್ಕೂ ತೊಡಕಾಗುತ್ತದೆ,,,
ಅಮ್ಮ ಆದ್ಮಿ ಪಾರ್ಟಿಯಲ್ಲಿ ಅನೇಕ ಹೊಸ ಬದಲಾವಣೆಗಳನ್ನು ಕಾಣುತ್ತೇವೆ……
ಎನಗಿಂತ ಕಿರಿಯರಿಲ್ಲ ಸಬ್ ಭಕ್ತರಿಗಿಂತ ಹಿರಿಯರಿಲ್ಲ ಇಂತಿ ನಿಮ್ಮ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು” (ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಇದ್ದಂತೆಯೇ ಯಥಾವತ್ತು ಪ್ರಕಟಿಸಲಾಗಿದೆ)

ಸ್ವಾಮೀಜಿಯವರು ಇಷ್ಟು ದಿನ ಮೊದಲೇ ಭವಿಷ್ಯ ನುಡಿದಿದ್ದಾರೆ ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಸ್ವಾಮೀಜಿ ಈ ಕುರಿತು ಕುರುಹು ನೀಡಿದ್ದು ನಿಜ. ಆದರೆ ಮೇಲಿನಂತೆ ಸಂಪೂರ್ಣ ಭವಿಷ್ಯ ಹೇಳಿರಲಿಲ್ಲ.

ಅವರು ಆಗಸ್ಟ್‌ 27ರಂದು ಹಾಕಿದ್ದ ಪೋಸ್ಟ್‌ನಲ್ಲಿ, “ನಮ್ಮ ದೇಶದ ಉದ್ಯಮಿಗಾರರಾದ ಟಾಟಾ ವಂಶಸ್ತರ ಹಿರಿಯರಿಗೆ ಕಂಟಕ ಎದುರಾಗುತದೆ, ….ನಂತರ ದಿನಗಳಲ್ಲಿ ಕಂಪನಿಯ ವ್ಯವಹಾರಕ್ಕೂ ತೊಡಕಾಗುತ್ತದೆ,,,” ಎಂಬುದಷ್ಟೆ ಇತ್ತು. ಆದರೆ ಭಾನುವಾರ ಮದ್ಯಾಹ್ನ ಸೈರಸ್‌ ಮಿಸ್ತ್ರಿ ಅಪಘಾತದಲ್ಲಿ ನಿಧನವಾಗುತ್ತಿದ್ದಂತೆಯೇ ಸ್ವಾಮೀಜಿ ತಮ್ಮ ಪೋಸ್ಟ್‌ನಲ್ಲಿ ಎಡಿಟ್‌ ಮಾಡಿದ್ದಾರೆ. “ನಮ್ಮ ದೇಶದ ಉದ್ಯಮಿಗಾರರಾದ ಟಾಟಾ ವಂಶಸ್ತರ ಹಿರಿಯರಿಗೆ ಕಂಟಕ ಎದುರಾಗುತದೆ,ಅಧ್ಯಕ್ಷರು ಹಾಲಿ ಅಥವಾ ಮಾಜಿ ಅಧ್ಯಕ್ಷರ ದುರ್ಮರಣ ….ನಂತರ ದಿನಗಳಲ್ಲಿ ಕಂಪನಿಯ ವ್ಯವಹಾರಕ್ಕೂ ತೊಡಕಾಗುತ್ತದೆ,,,” ಎಂದು ಬದಲಾಯಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್‌ ಅನ್ನು ಎಡಿಟ್‌ ಮಾಡುವ ಅವಕಾಶ ನೀಡಲಾಗಿದೆ. ಎಷ್ಟು ಬಾರಿ ಬೇಕಾದರೂ ಪೋಸ್ಟ್‌ನಲ್ಲಿನ ಅಕ್ಷರಗಳನ್ನು ಬದಲಾಯಿಸಬಹುದು, ಡಿಲೀಟ್‌ ಮಾಡಬಹುದು, ಸೇರಿಸಬಹುದು. ಈ ಹಿಂದೆ ಎಷ್ಟು ಬಾರಿ ಎಡಿಟ್‌ ಮಾಡಿದ್ದಾರೆ ಎನ್ನುವುದು ತಿಳಿಯುತ್ತಿರಲಿಲ್ಲ. ಆದರೆ ಈಗ ಎಡಿಟ್‌ ಹಿಸ್ಟರಿ ನೋಡುವ ಅವಕಾಶವನ್ನು ಫೇಸ್‌ಬುಕ್‌ ನೀಡಿದೆ.

ಅದರಂತೆ, ಸ್ವಾಮೀಜಿ ಎಡಿಟ್‌ ಮಾಡಿರುವುದು ತಿಳಿದುಬಂದಿದೆ. ಸೈರಸ್‌ ಮಿಸ್ತ್ರಿ ಅವರು ನೇರವಾಗಿ ಟಾಟಾ ಕುಟುಂಬದವರಲ್ಲ. ಟಾಟಾ ಕುಟುಂಬದಂತೆಯೇ ಇವರೂ ಪಾರ್ಸಿ ಸಮುದಾಯಕ್ಕೆ ಸೇರಿದವರು. ಮಿಸ್ತ್ರಿ ಅವರ ಸಹೋದರಿ, ರತನ್‌ ಟಾಟಾ ಅವರ ಸಂಬಂಧಿಯನ್ನು ವಿವಾಹವಾಗಿದ್ದಾರೆ ಎನ್ನುವ ಮೂಲಕ ದೂರದ ಸಂಬಂಧಿಯಾಗಿದ್ದಾರೆ.

ಇದನ್ನೂ ಓದಿ | Cyrus Mistry Death | ಅಪಘಾತದಲ್ಲಿ ನಿಧನರಾದ ಸೈರಸ್ ಮಿಸ್ತ್ರಿ ಯಾರು? ಅವರ ಬಗ್ಗೆ ನಿಮಗೆಷ್ಟು ಗೊತ್ತು?

Exit mobile version