Site icon Vistara News

Karnataka Election Result: ನಮಗೆ ಅಧಿಕಾರ ಸಿಕ್ಕಿರೋದು ಮಜಾ ಮಾಡೋಕೆ ಅಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Siddaramaiah

displeasure in Karnataka Cabinet; Siddaramaiah Made some changes in Portfolios

ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election 2023) ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್​​ಗೆ ಈ ಸಲ ಸ್ಪಷ್ಟ ಬಹುಮತ ಬಂದಿದೆ. ಹೀಗೆ ಪಕ್ಷಕ್ಕೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ‘ಇವತ್ತಿನ ಗೆಲುವು ಬರೀ ಕಾಂಗ್ರೆಸ್​ ಪಕ್ಷದ್ದಲ್ಲ, ಕಾರ್ಯಕರ್ತರಲ್ಲ, ಇದು ಏಳು ಕೋಟಿ ಕನ್ನಡಿಗರ ಗೆಲುವು’ ಎಂದು ಹೇಳಿದರು. ಜನರಿಗೆ ಅತ್ಯುತ್ತಮ ಆಡಳಿತ ನೀಡುವ ಭರವಸೆ ಕೊಟ್ಟರು’. ಹಾಗೇ, ಐದು ಗ್ಯಾರಂಟಿಗಳಿಗೆ ಮೊದಲ ಕ್ಯಾಬಿನೆಟ್​ನಲ್ಲೇ ಅನುಮೋದನೆ ಕೊಡುತ್ತೇವೆ’ ಎಂದೂ ಹೇಳಿದರು.

’ಬಿಜೆಪಿಯವರು ರಾಜ್ಯದಲ್ಲಿ ಯಾವತ್ತೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ. ಆಪರೇಶನ್​ ಕಮಲದ ಮೂಲಕ ಅಧಿಕಾರ ಹಿಡಿದವರು. ಈಗಲೂ ಜನರು ತಮ್ಮ ನಿರ್ಧಾರ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಯಾವಾಗೆಲ್ಲ ಅತಂತ್ರ ವಿಧಾನಸಭೆ ಆಗಿದೆಯೋ ಆಗೆಲ್ಲ ಸುಭದ್ರ ಸರ್ಕಾರ/ಆಡಳಿತ ಕೊಡಲು ಸಾಧ್ಯವಾಗಲಿಲ್ಲ. 2004, 2008, 2018 ಇರಬಹುದು. ಸಮ್ಮಿಶ್ರ ಸರ್ಕಾರ ಮಾಡಿದರೆ, ಒಬ್ಬ ಮುಖ್ಯಮಂತ್ರಿಗಿಂತ ಹೆಚ್ಚು ಜನ ಮುಖ್ಯಮಂತ್ರಿಗಳಾದರೆ, ಒಂದಕ್ಕಿಂತ ಹೆಚ್ಚು ಪಕ್ಷ ಸೇರಿ ಸರ್ಕಾರ ರಚನೆ ಮಾಡಿದರೆ ಸುಭದ್ರ ಸರ್ಕಾರ ರಚನೆಯಾಗದು. ಸುಭದ್ರ ಸರ್ಕಾರ ರಚನೆಯಾಗದೆ ಇದ್ದರೆ ಅಲ್ಲಿ ಜನರಿಗೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವೇ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

2013ರಲ್ಲಿ ಜನರು ನಮಗೆ ಬಹುಮತ ಕೊಟ್ಟಿದ್ದರು. ಆಗಲೂ ಕೂಡ ಐದು ವರ್ಷ ಉತ್ತಮ ಆಡಳಿತ ಮಾಡಿದೆವು. ಜನರ ನಿರೀಕ್ಷೆಗೆ ಅನುಗುಣವಾಗಿ ಆಡಳಿತ ಮಾಡಿದೆವು. ಕೊಟ್ಟ ಎಲ್ಲ ಭರವಸೆಗಳನ್ನೂ ಈಡೇರಿಸಿದೆವು. ನಮ್ಮ ಆಡಳಿತದ ಬಗ್ಗೆ ಗೌರವ ಬಂದಿತ್ತು. ಆದರೆ ಬಿಜೆಪಿ ಇದ್ದಾಗ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಹಾಗಾಗಿಯೇ ಈ ಸಲ ಜನರ ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಕೊಡಲೇಬೇಕು ಎಂದು ನಿರ್ಧರಿಸಿದ್ದರು. ಬದಲಾವಣೆ ಬಯಸಿಯೇ ಕಾಂಗ್ರೆಸ್​ಗೆ ಇನ್ನೊಂದು ಅವಕಾಶ ಕೊಟ್ಟಿದ್ದಾರೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ನಾವು ಜನರಿಗೆ ಕೊಟ್ಟ ಮಾತನ್ನು ಈಡೇರಿಸಬೇಕು. ಬಿಜೆಪಿಯವರು ಕರ್ನಾಟಕಕ್ಕೆ ಕಳಂಕ ತಂದಿದ್ದಾರೆ. ಅವರ ಭ್ರಷ್ಟಾಚಾರ, ಕೆಲಸ ಮಾಡದೆ ಇದ್ದಿದ್ದು, ದುರಾಡಳಿತದಿಂದ ಜನರು ರೋಸಿ ಹೋಗಿದ್ದರು. ಹೀಗಾಗಿಯೇ ಈ ಸಲ ಕಾಂಗ್ರೆಸ್ ಪರ ಗಾಳಿ ಬೀಸಿದೆ’ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Election results 2023: ಕಾಂಗ್ರೆಸ್‌ ಸುನಾಮಿಯಲ್ಲಿ ಕೊಚ್ಚಿ ಹೋದ ಬಿಜೆಪಿ, ಕೈಗೆ ಅಧಿಕಾರ ಗದ್ದುಗೆ

ಕಾಂಗ್ರೆಸ್ ಜಾತ್ಯಾತೀತ ಪಕ್ಷ
ಕಾಂಗ್ರೆಸ್ ಪಕ್ಷಕ್ಕೆ ಈ ಸಲ ಎಲ್ಲ ಜಾತಿ-ಧರ್ಮದ ಮತಗಳೂ ಬಂದಿವೆ. ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷ ಎಂಬುದು ಸಾಬೀತಾಗಿದೆ. ಈ ಐದು ವರ್ಷ ಅವಕಾಶ ಕೊಟ್ಟಿದ್ದಾರಲ್ಲ, ಆ ಅವಕಾಶವನ್ನು ಜನಪರವಾಗಿ ನಾವು ಉಪಯೋಗಿಸಬೇಕು. ಅಧಿಕಾರ ಇರೋದು ಮಜಾ ಮಾಡೋಕೆ ಅಲ್ಲ. ಜನ ಅವಕಾಶ ಕೊಟ್ಟಾಗ ನಾವು ಜನಪರ ಆಡಳಿತವನ್ನೇ ಕೊಡಬೇಕು. ಆಗ ಮಾತ್ರ ನಮ್ಮ ಮೇಲೆ ಜನರಿಗೆ ಗೌರವ ಬರುತ್ತದೆ. ಎಲ್ಲರೂ ಆ ದಿಕ್ಕಿನಲ್ಲೇ ಕೆಲಸ ಮಾಡಬೇಕು. ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದ್ದೇವೆ. ಆ ಐದೂ ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್​ನಲ್ಲೇ ಒಪ್ಪಿಗೆ ಕೊಟ್ಟು, ಆದೇಶ ಹೊರಡಿಸುತ್ತೇವೆ. ಕಾಂಗ್ರೆಸ್​ನ ಐದು ಭರವಸೆಗಳನ್ನು ಈಡೇರಿಸೋಕೆ ಆಗಲ್ಲ. ರಾಜ್ಯವನ್ನು ಸಾಲದಲ್ಲಿ ಮುಳುಗಿಸಬೇಕು ಎಂದೆಲ್ಲ ನರೇಂದ್ರ ಮೋದಿ ವ್ಯಂಗ್ಯವಾಡಿದ್ದರು. ಆದರೆ ಬಿಜೆಪಿಯವರು ಇಡೀ ದೇಶವನ್ನೇ ಸಾಲದಲ್ಲಿ ಮುಳುಗಿಸಿದ್ದಾರೆ’ ಎಂದರು. ಹಾಗೇ, ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸಿದರು.

ಮಲ್ಲಿಕಾರ್ಜುನ್​ ಖರ್ಗೆ ಹೇಳಿದ್ದೇನು?
‘ಇವತ್ತಿನ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಜಯಭೇರಿ ಹೊಡೆದಿದೆ ಮತ್ತು ಕಾಂಗ್ರೆಸ್ ಪಕ್ಷ ಈ ಸಲ ಭಾರಿ ಬಹುಮತದಿಂದ ಕರ್ನಾಟಕ ರಾಜ್ಯದಲ್ಲಿ ಆರಿಸಿ ಬರುತ್ತದೆ ಎಂದು ಪದೇಪದೆ ಹೇಳಿದ್ದೇವು. ಕಾಂಗ್ರೆಸ್ ಬಾವುಟ ನಮ್ಮ ವಿಧಾನಸೌಧದ ಮೇಲೆ ಹಾರುತ್ತದೆ ಎಂದೂ ಹೇಳಿದ್ದೆವು. ನಮಗೆ ಸಿಕ್ಕಿದ್ದು ಒಂದು ದೊಡ್ಡ ಗೆಲುವು. ಇಡೀ ದೇಶದಲ್ಲೇ ನಮಗೆ ಹೊಸದೊಂದು ಉತ್ಸಾಹ ಬಂದಿದೆ. ವಿಶೇಷವಾಗಿ ಬಿಜೆಪಿಯವರು ಪ್ರತಿಸಲ ನಮ್ಮನ್ನು ಕೆಣಕಿ ಮಾತಾಡ್ತಿದ್ದರು. ಆದರೆ ಈಗ ಏನಾಯಿತು? ಬಿಜೆಪಿ ಬಾಗಿಲೇ ಮುಚ್ಚಿ ಹೋಯಿತು. ಇಡೀ ದಕ್ಷಿಣ ಭಾರತವೇ ಬಿಜೆಪಿ ಮುಕ್ತವಾಗಿದೆ’ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

Exit mobile version