ಪಂಜಾಬ್ ನ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರನ್ನು ದುಷ್ಕರ್ಮಿಗಳು ಭಾನುವಾರ ಸಂಜೆ ಗುಂಡಿನ ಸುರಿಮಳೆಗರೆದು ಹತ್ಯೆಗೈದಿದ್ದಾರೆ. ಪಂಜಾಬ್ ನ ಆಪ್ ಸರಕಾರ ಸಿಧು ಅವರಿಗಿದ್ದ ಪೊಲೀಸ್ ರಕ್ಷಣೆ ಹಿಂತೆಗೆದುಕೊಂಡ 24 ಗಂಟೆಯೊಳಗೆ ಅವರ ಹತ್ಯೆ ನಡೆದಿದೆ.
ಪಂಜಾಬ್ ನ ಮಾನ್ಸಾ ಜಿಲ್ಲೆಯ ಜವಾಹರ್ ಕೆ ಗ್ರಾಮದಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿದೆ. ಸಿಧು ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು 30ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದ್ದಾರೆ. ಒಟ್ಟು 8 ಗುಂಡುಗಳು ಇವರ ದೇಹವನ್ನು ಹೊಕ್ಕಿವೆ. ಈ ಘಟನೆಯಲ್ಲಿ ಇತರ ಇಬ್ಬರೂ ಗಾಯಗೊಂಡಿದ್ದಾರೆ.
ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದರು…
ಸಿಧು ಮೂಸೆ ವಾಲಾ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾನ್ಸಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಪ್ ಅಭ್ಯರ್ಥಿ ವಿಜಯ್ ಸಿಂಗ್ಲಾ ಅವರೆದುರು ಸೋತಿದ್ದರು. ಇದೇ ವಿಜಯ್ ಸಿಂಗ್ಲಾ ಅವರನ್ನು ಇತ್ತೀಚೆಗೆ ಭ್ರಷ್ಟಾಚಾರ ಎಸಗಿದ ಆರೋಪದಲ್ಲಿ ಸಚಿವ ಹುದ್ದೆಯಿಂದ ವಜಾ ಮಾಡಲಾಗಿತ್ತು.
ಆಪ್ ಸರಕಾರದ ವಿರುದ್ಧ ಆರೋಪ
ಸಿಧು ಅವರ ಹತ್ಯೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅವರ ಸಾವಿಗೆ, ವಿವೇಚನಾ ರಹಿತವಾಗಿ ಭದ್ರತೆ ಹಿಂತೆಗೆದುಕೊಂಡ ಆಪ್ ಸರಕಾರವೇ ಹೊಣೆ ಎಂದು ಕಾಂಗ್ರೆಸ್ ಆಪಾದಿಸಿದೆ. ”ಪಂಜಾಬ್ ಮುಖ್ಯಮಂತ್ರಿ ಮಾನ್ ವಿರುದ್ಧವೇ ಎಫ್ ಐ ಆರ್ ದಾಖಲಿಸಬೇಕು. ಸಿಧು ಹತ್ಯೆಗೆ ಮಾನ್ ಹೊಣೆ” ಎಂದು ಬಿಜೆಪಿ ಆರೋಪಿಸಿದೆ.
ಯಾರು ಈ ಮೂಸೆ ವಾಲಾ?
30 ವರ್ಷದ ಸಿಧು ಅವರ ಪೂರ್ಣ ಹೆಸರು ಶುಭದೀಪ್ ಸಿಂಗ್ ಸಿಧು. ಮೂಸೆ ವಾಲಾ ಅನ್ನೋದು ಅವರ ಗ್ರಾಮದ ಹೆಸರು. ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಮುಗಿಸಿದ ಬಳಿಕ ಕೆಲ ಕಾಲ ಇವರು ಕೆನಡಾದಲ್ಲಿದ್ದರು. ತಮ್ಮ ಕಾಲೇಜು ದಿನಗಳಲ್ಲೇ ಸಂಗೀತ ಸಂಯೋಜನೆ ಮತ್ತು ಹಾಡಿನ ಪಟ್ಟುಗಳನ್ನು ಕಲಿತು ಮಿಂಚಿದ್ದರು.
ಗನ್ ವ್ಯಾಮೋಹಿ ಗನ್ ಗೆ ಬಲಿ!
ಸಿಧು ಮೂಸೆ ವಾಲಾ ಮಾಡಿದ್ದ ಕಿತಾಪತಿಗಳೇನೂ ಕಡಿಮೆ ಇರಲಿಲ್ಲ. ಹಲವಾರು ಆಕ್ಷೇಪಾರ್ಹ ಹಾಡುಗಳಿಂದ ಇವರು ವಿವಾದಕ್ಕೆ ತುತ್ತಾಗಿದ್ದರು. ತಮ್ಮ ಅನೇಕ ಹಾಡುಗಳಲ್ಲಿ ಗನ್ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದರು. ಗ್ಯಾಂಗ್ ಸ್ಟರ್ ಗಳನ್ನು ವೈಭವೀಕರಿಸಿದ್ದರು. ಅಂತಿಮವಾಗಿ ಇವರೇ ಗುಂಡಿಗೆ ಬಲಿಯಾಗಿರುವುದು ವಿಪರ್ಯಾಸ.
ಸಿಧು ಅವರ ಮರಣದ ವಿಷಯದ ಬಗ್ಗೆ ಕೆ.ಸಿ ವೇಣುಗೋಪಾಲ್ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.