ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಬಣಕ್ಕೆ ನೀಡಲಾಗಿರುವ ಎರಡು ಖಡ್ಗ ಮತ್ತು ಗುರಾಣಿ ಚಿಹ್ನೆಗೆ ಸಿಖ್ ಸಮುದಾಯದ ನಾಯಕರು (Sikh Leaders) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಿಂಬಲ್ ಖಾಲ್ಸಾ ಪಂಥದ ಧಾರ್ಮಿಕ ಚಿಹ್ನೆ ರೀತಿಯಲ್ಲಿದೆ. ಹಾಗಾಗಿ, ಈ ಚಿಹ್ನೆಯನ್ನು ರದ್ದುಪಡಿಸಬೇಕು ಎಂದು ಅವರು ಆಯೋಗಕ್ಕೆ ಕೇಳಿಕೊಂಡಿದ್ದಾರೆ. ಎರಡು ಹೋಳಾಗಿರುವ ಶಿವಸೇನೆಗೆ ಆಯೋಗವು ಮೂಲ ಚಿಹ್ನೆಯನ್ನು ಬಳಸಲು ಅನುಮತಿ ನೀಡಿಲ್ಲ. ಹಾಗಾಗಿ, ಏಕನಾಥ ಶಿಂಧೆ ಬಣಕ್ಕೆ ಆಯೋಗವು ಎರಡು ಖಡ್ಗ ಮತ್ತು ಗುರಾಣಿ ಚಿತ್ರವನ್ನು ಚಿಹ್ನೆಯಾಗಿ ಹಂಚಿಕೆ ಮಾಡಿತ್ತು.
ಗುರುದ್ವಾರ ಸಚಖಂಡ ಮಂಡಳಿಯ ಮಾಜಿ ಪ್ರಧಾನಿ ಕಾರ್ಯದರ್ಶಿಯೂ ಆಗಿರುವ ಸ್ಥಳೀಯ ಕಾಂಗ್ರೆಸ್ ನಾಯಕ ರಂಜಿತ್‌ಸಿಂಗ್ ಕಮಥೆಕರ್ ಅವರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಧಾರ್ಮಿಕ ಸಂಪರ್ಕ ಹೊಂದಿರುವ ಈ ಚಿಹ್ನೆಯನ್ನು ರಾಜಕೀಯ ಪಕ್ಷಗಳಿಗೆ ನೀಡಬಾರದು ಎಂದು ತಿಳಿಸಿದ್ದಾರೆ. ಒಂದು ವೇಳೆ, ಕೇಂದ್ರ ಚುನಾವಣಾ ಆಯೋಗವು ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಅವರು ಹೇಳಿದ್ದಾರೆ.
ಖಾಲ್ಸಾ ಪಂಥದ ಚಿಹ್ನೆಯಾಗಿ ಎರಡು ಖಡ್ಗ ಮತ್ತು ಗುರಾಣಿಯನ್ನಾಗಿ ನಮ್ಮ ಧಾರ್ಮಿಕ ಗುರು, ಶ್ರೀ ಗುರು ಗೋವಿಂದ್ ಸಿಂಗ್ ಅವರು ನೀಡಿದ್ದಾರೆ. ಈಗ ಅದೇ ರೀತಿಯ ಚಿಹ್ನೆಯನ್ನು ರಾಜಕೀಯ ಪಕ್ಷಕ್ಕೆ ನೀಡಿರುವುದು ಅಕ್ಷಮ್ಯ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚುನಾವಣಾ ಆಯೋಗವು ತಮ್ಮ ಬಣಕ್ಕೆ ಎರಡು ಖಡ್ಗ ಮತ್ತು ಗುರಾಣಿಯನ್ನು ಚುನಾವಣಾ ಚಿಹ್ನೆಯಾಗಿ ನೀಡಿರುವುದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯೂ ಆಗಿರುವ ಏಕನಾಥ ಶಿಂಧೆ ಅವರು ಸ್ವಾಗತಿಸಿದ್ದರು. ಈ ಚಿಹ್ನೆಯು ಶಿವಸೇನೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಅವರಿಗೂ ಸಂಬಂಧಿಸಿದ್ದಾಗಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ | ಶಾಸಕರ ಜತೆ ಏಕನಾಥ್ ಶಿಂಧೆ: ಫೋಟೋ, ವಿಡಿಯೋ ಬಹಿರಂಗ