ನವದೆಹಲಿ: ಮೇಘಸ್ಫೋಟದಿಂದಾಗಿ (Cloud Burst) ಸಿಕ್ಕಿಮ್‌ನಲ್ಲಿ (Sikkim Flash Flood) ಉಂಟಾದ ದಿಢೀರ್ ಪ್ರವಾಹದಲ್ಲಿ 23 ಯೋಧರು ಸೇರಿದಂತೆ 43 ಜನರು ನಾಪತ್ತೆಯಾಗಿದ್ದಾರೆ. 8 ಜನರು ಮೃತಪಟ್ಟಿದ್ದಾರೆ. ಎನ್‌ಡಿಆರ್‌ಎಫ್ (NDRF) ಸೇರಿದಂತೆ ಇತರ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಮಧ್ಯೆ, ಈ ದಿಢೀರ್ ಪ್ರವಾಹ ಉಂಟಾದ ಕ್ಷಣದ ಉಪಗ್ರಹ ಫೋಟೋಗಳನ್ನು (Satellite Images) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಹಂಚಿಕೊಂಡಿದೆ. ಮೇಘಸ್ಫೋಟದಿಂದಾಗಿ ಸಿಕ್ಕಿಂನ ಲ್ಹೋನಕ್ ಸರೋವರದ ಸುಮಾರು ಶೇ.65 ಅಂದರೆ, 105 ಹೆಕ್ಟೇರ್ ಪ್ರದೇಶದ ನೀರು ಹರಿದು ಹೋಗಿ, ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ.
ಬಾಹ್ಯಾಕಾಶ ಸಂಸ್ಥೆ ಇಸ್ರೋ, ಬುಧವಾರ ಸಂಜೆ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು (ದಿಢೀರ್ ಪ್ರವಾಹದ ಮೊದಲು ಮತ್ತು ನಂತರ) ಸರೋವರದಲ್ಲಿನ ನೀರಿನ ಪರಿಮಾಣದಲ್ಲಿ ನಾಟಕೀಯ ಬದಲಾವಣೆಗಳನ್ನು ತೋರಿಸಿದೆ. ಸೆಪ್ಟೆಂಬರ್ 17 ಮತ್ತು ಸೆಪ್ಟೆಂಬರ್ 28 ರಂದು ತೆಗೆದ ಫೋಟೋಗಳು ಅನುಕ್ರಮವಾಗಿ 162.7 ಮತ್ತು 167.4 ಹೆಕ್ಟೇರ್ ಹೊಂದಿರುವ ಬುಲೆಟ್ ಆಕಾರದ ಸರೋವರವನ್ನು ತೋರಿಸುತ್ತವೆ.
ಈ ಸುದ್ದಿಯನ್ನೂ ಓದಿ: Sikkim Flash Flood: ಸಿಕ್ಕಿಂ ದಿಢೀರ್ ಪ್ರವಾಹ, ಇನ್ನೂ ಪತ್ತೆಯಾಗಿಲ್ಲ 23 ಯೋಧರು, 8 ಮಂದಿ ಸಾವು
ಬುಧವಾರ ಬೆಳಿಗ್ಗೆ 6 ಗಂಟೆಗೆ ತೆಗೆದ ಚಿತ್ರ ಎಲ್ಲ ಕತೆ ಹೇಳುತ್ತದೆ. ಮೇಘಸ್ಫೋಟ ಮತ್ತು ಹಠಾತ್ ಪ್ರವಾಹವು ರಾಜ್ಯದಲ್ಲಿ ವಿನಾಶವನ್ನೇ ಸೃಷ್ಟಿಸಿದೆ. ಪ್ರವಾಹಕ್ಕೆ ಜಲವಿದ್ಯುತ್ ಯೋಜನೆಯ ದೊಡ್ಡ ಭಾಗಗಳನ್ನು ಕೊಚ್ಚಿಕೊಂಡು ಹೋಗಿದೆ ಮತ್ತು 49 ಜನರನ್ನು ಕಾಣೆಯಾಗಿದೆದ್ದಾರೆ. ಸರೋವರವು ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ ಮತ್ತು ಅಂದಾಜು 60.3 ಹೆಕ್ಟೇರ್ ಪ್ರದೇಶದಲ್ಲಷ್ಟೇ ನೀರು ಉಳಿದಿದೆ.
ಸರೋವರದ ಪ್ರದೇಶದಲ್ಲಿ ಬದಲಾವಣೆಗಳನ್ನು ಫೋಟೋಗಳ ಮೂಲಕ ಗುರುತಿಸಬಹುದು. ಸೆಪ್ಟೆಂಬರ್ 17, ಸೆಪ್ಟೆಂಬರ್ 28, ಮತ್ತು ಅಕ್ಟೋಬರ್ 4 ರ ಫೋಟೋಗಳ ಪ್ರಕಾರ, ಸರೋವರವು ಒಡೆದಿರುವುದನ್ನು ಗಮನಿಸಬಹುದು. ಮೇಘ ಸ್ಫೋಟದ ಬಳಿಕ ಸರೋರವದ ಸುಮಾರು 105 ಹೆಕ್ಟೇರ್ ಬರಿದಾಗಿದೆ. ಇದರಿಂದಾಗಿ ಕೆಳಭಾಗದಲ್ಲಿ ಹಠಾತ್ ಪ್ರವಾಹ ಉಂಟಾಗಿರಬಹುದು. ಇನ್ನಷ್ಟು ಪರಿಶೀಲನೆ ಮುಂದುವರಿಸುತ್ತೇವೆ ಎಂದು ಇಸ್ರೋ ಹೇಳಿದೆ.