Site icon Vistara News

Sikkim Flash Floods: ದಿಢೀರ್‌ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ; ಹೆಲ್ಪ್‌ಲೈನ್‌ ನಂಬರ್‌ ಪ್ರಕಟಿಸಿದ ಸರ್ಕಾರ

sikkim flood

sikkim flood

ಸಿಕ್ಕಿಂ: ಮೇಘಸ್ಫೋಟದಿಂದಾಗಿ (Cloud Burst) ಸಿಕ್ಕಿಂ ತತ್ತರಿಸಿ ಹೋಗಿದೆ. ದಿಢೀರ್‌ ಪ್ರವಾಹಕ್ಕೆ (Sikkim Flash Floods) ಸಿಲುಕಿ ಮೃತಪಟ್ಟವರ ಸಂಖ್ಯೆ ಇದೀಗ 14ಕ್ಕೆ ಏರಿಕೆಯಾಗಿದ್ದು, 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನಾಪತ್ತೆಯಾದವರ ಪೈಕಿ 22 ಯೋಧರೂ ಸೇರಿದ್ದಾರೆ. ಗಾಯಗೊಂಡ 26 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೇಘಸ್ಫೋಟದಿಂದಾಗಿ ಸಿಕ್ಕಿಂನ ಲ್ಹೋನಕ್ ಸರೋವರದ ನೀರು ಹರಿದು ಹೋಗಿ ದಿಢೀರ್‌ ಪ್ರವಾಹ ಕಾಣಿಸಿಕೊಂಡಿತ್ತು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಸೇವೆಗಳನ್ನು ಕೈಗೊಳ್ಳಲಾಗುತ್ತಿದ್ದು, ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಮಾತನಾಡಿ, ಸಾವರ್ಜನಿಕರು ಅನಗತ್ಯ ಪ್ರಯಾಣ ಮಾಡದಿರುವಂತೆ ಮನವಿ ಮಾಡಿದ್ದಾರೆ. ಜತೆಗೆ ಸಿಕ್ಕಿಂ ಸರ್ಕಾರ ಹೆಲ್ಪ್‌ಲೈನ್‌ ನಂಬರ್‌ಗಳನ್ನು ಪ್ರಕಟಿಸಿದೆ.

ಎಕ್ಸ್‌ ಮೂಲಕ ಸರ್ಕಾರ ಈ ಹೆಲ್ಪ್‌ಲೈನ್‌ ನಂಬರ್‌ ಪ್ರಕಟಿಸಿದೆ. ತುರ್ತು ಪರಿಸ್ಥಿತಿ ಕಾಣಿಸಿಕೊಂಡರೆ ಸ್ಥಿರ ದೂರವಾಣಿ ಸಂಖ್ಯೆ -03592-202892, 03592-221152, ಮೊಬೈಲ್‌ ಸಂಖ್ಯೆ-8001763383, ಫ್ಯಾಕ್ಸ್‌-03592-202042 ಅಥವಾ ‘112’ ನಂಬರ್‌ಗೆ ಕರೆ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ಸಿಕ್ಕಿಂ ಪ್ರವಾಹ; ಬೆಳವಣಿಗೆಗಳೇನು?

ಪ್ರವಾಹಪೀಡಿತರ ನೆರವಿಗಾಗಿ ಭಾರತೀಯ ಸೇನೆ ಕೂಡ 3 ಹೆಲ್ಪ್‌ಲೈನ್‌ಗಳನ್ನು ಆರಂಭಿಸಿದೆ. ಕುಟುಂಬ ಸದಸ್ಯರು ನಾಪತ್ತೆಯಾಗಿದ್ದರೆ ಈ ನಂಬರ್‌ಗೆ ಸಂಪರ್ಕಿಸಬಹುದು. ಉತ್ತರ ಸಿಕ್ಕಿಂ ಭಾಗದವರು 8750887741 ನಂಬರ್‌ಗೆ ಕರೆ ಮಾಡಬಹುದು. ಪೂರ್ವ ಸಿಕ್ಕಿಂ ಭಾಗದವರು ಸಂಪರ್ಕಿಸಬೇಕಾದ ನಂಬರ್‌ 8756991895 ಮತ್ತು ನಾಪತ್ತೆಯಾದ 22 ಯೋಧರ ಬಗ್ಗೆ ವಿಚಾರಿಸಲು 7588302011 ನಂಬರ್‌ ಡಯಲ್‌ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.

ಕೆಲವು ಅಧಿಕಾರಿಗಳ ಪ್ರಕಾರ ಈಗಾಗಲೇ ಸಾವಿನ ಸಂಖ್ಯೆ 40ಕ್ಕೆ ತಲುಪಿದೆ. ಆದರೆ ನಿಖರವಾದ ಸಂಖ್ಯೆಯನ್ನು ಗುರುತಿಸಲು ವರದಿಗಳನ್ನು ಪರಿಶೀಲಿಸಲಾಗುತ್ತಿದೆ. ದುರಂತದ ನಂತರ ಕಾಣೆಯಾದ ಅಥವಾ ಗಾಯಗೊಂಡವರಲ್ಲಿ ಬಹುಪಾಲು ಮಂದಿ ಮಂಗನ್ ಜಿಲ್ಲೆಯ ಚುಂಗ್ಥಾಂಗ್, ಗ್ಯಾಂಗ್ಟಾಕ್ ಜಿಲ್ಲೆಯ ಡಿಚು ಮತ್ತು ಸಿಂಗ್ಟಮ್ ಹಾಗೂ ಪಕ್ಯೋಂಗ್ ಜಿಲ್ಲೆಯ ರಂಗ್ಪೋಗೆ ಸೇರಿದವರು ಎಂದು ಅಂದಾಜಿಸಲಾಗಿದೆ.

ಪರಿಸ್ಥಿತಿ ಅವಲೋಕಿಸಿದ ಬಳಿಕ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಬುಧವಾರ ಚುಂಗ್ಥಾಂಗ್ ಅಣೆಕಟ್ಟಿನ ಸುರಂಗದಲ್ಲಿ ಸಿಲುಕಿರುವ ಜನರು ಮತ್ತು ಪ್ರವಾಸಿಗರನ್ನು ಆದ್ಯತೆಯ ಆಧಾರದ ಮೇಲೆ ಸ್ಥಳಾಂತರಿಸಬೇಕು ಎಂದು ನಿರ್ದೇಶನ ನೀಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ 3,000ಕ್ಕೂ ಹೆಚ್ಚು ಪ್ರವಾಸಿಗರು ರಾಜ್ಯದಲ್ಲಿ ಸಿಲುಕಿದ್ದಾರೆ ಎಂದು ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿ.ಬಿ.ಪಾಠಕ್ ತಿಳಿಸಿದ್ದಾರೆ.

ವ್ಯಾಪಕ ಮಳೆ ಅಪಾರ ನಾಶ-ನಷ್ಟ ತಂದಿಟ್ಟಿದೆ. ರಂಗ್ಪೋದ ಕೈಗಾರಿಕಾ ಪ್ರದೇಶದಲ್ಲಿ 150ಕ್ಕಿಂತ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇದು ತೀಸ್ತಾ ನದಿ ದಂಡೆಯಲ್ಲಿರುವುದರಿಂದ ಹೆಚ್ಚಿನ ಹಾನಿ ಉಂಟಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಪ್ರವಾಹ ಬಾಧಿಸ್ಪಟ್ಟ ಸಿಂಗ್ಟಮ್‌, ರಂಗ್ಪೋ, ಡಿಚು ಮತ್ತು ಆದರ್ಶ್‌ ಗ್ವಾನ್‌ ಪ್ರದೇಶಗಳಲ್ಲಿ ನಿರಾಶ್ರಿತರ ಕ್ಯಾಂಪ್‌ ಆರಂಭಿಸಿದೆ. ಸಂಪರ್ಕದ ಕೊರತೆ ಕಾರಣದಿಂದ ಚುಂಗ್ಥಾಂಗ್‌ನಲ್ಲಿ ಭಾರತೀಯ ಸೇನೆ ನಿರಾಶ್ರಿತರ ಕ್ಯಾಂಪ್‌ ತೆರೆದಿದೆ.

ಇದನ್ನೂ ಓದಿ: Sikkim Flash Flood: ಸಿಕ್ಕಿಂನಲ್ಲಿ ಮೇಘಸ್ಫೋಟ, ದಿಢೀರ್ ಪ್ರವಾಹ ಹೇಗಾಯ್ತು? ಉಪಗ್ರಹ ಫೋಟೋದಲ್ಲಿದೆ ಮಾಹಿತಿ!

ಸರ್ಕಾರಿ ಮೂಲಗಳ ಪ್ರಕಾರ, ಸುಮಾರು 14 ಸೇತುವೆಗಳು ಕುಸಿದಿವೆ. ಈ ಪೈಕಿ 9 ಸೇತುವೆಗಳನ್ನು ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌ (BRO) ದುರಸ್ತಿ ಪಡಿಸಿದರೆ ಉಳಿ 5 ಸೇತುವೆಗಳ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಗ್ಯಾಂಗ್‌ಟೋಕ್‌ನಿಂದ ಸಿಲಿಗುರಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-10 ಲಿಂಖುವಿರ್‌-ಸೇತಿಝೋರ ಬಳಿ ಸಂಪೂರ್ಣ ಕೊಚ್ಚಿ ಹೋಗಿದೆ. ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದ ನಂತರ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version