ಬೆಂಗಳೂರು: ಶನಿವಾರ ಸಂಜೆ ಸಂಭವಿಸಿದ ಮಂಗಳೂರು ಆಟೋರಿಕ್ಷಾ ಸ್ಫೋಟ ಹಾಗೂ ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರ್ ಸ್ಫೋಟದ ನಡುವೆ ಸಾಮ್ಯತೆಗಳಿವೆಯೇ? ಇಂಥದೊಂದು ಪ್ರಶ್ನೆ ಇಟ್ಟುಕೊಂಡು ವಿಶ್ಲೇಷಣೆಗಳು ನಡೆಯುತ್ತಿವೆ. ಈ ಎರಡೂ ಉಗ್ರ ಕೃತ್ಯಗಳ ನಡುವೆ ಮೇಲ್ನೋಟಕ್ಕೆ ಸಾಕಷ್ಟು (Mangalore Blast) ಸಾಮ್ಯತೆಗಳಿವೆ.
ಕೊಯಮತ್ತೂರು ಸ್ಫೋಟ ಪ್ರಕರಣದಲ್ಲಿ ಬಾಂಬ್ ಪ್ಲಾಂಟ್ ಮಾಡಲು ಹೊರಟಿದ್ದ ವ್ಯಕ್ತಿಯೇ ಸ್ಫೋಟದಲ್ಲಿ ಮೃತಪಟ್ಟರೆ, ಮಂಗಳೂರು ಪ್ರಕರಣದಲ್ಲಿ ವ್ಯಕ್ತಿ ಗಾಯಗೊಂಡಿದ್ದಾನೆ. ಅದೇ ರೀತಿ, ನಿರ್ದಿಷ್ಟ ಸ್ಥಳಕ್ಕೆ ಬಾಂಬ್ ಸಾಗಿಸುವಾಗ ದಾರಿ ಮಧ್ಯೆಯೇ ಸ್ಫೋಟ ಸಂಭವಿಸಿದೆ. ಕೊಯಮತ್ತೂರು ಪ್ರಕರಣದಲ್ಲಿ ಕಾರಿನಲ್ಲಿ ಬಾಂಬ್ ಸ್ಪೋಟವಾದರೆ, ಮಂಗಳೂರು ಕೇಸಿನಲ್ಲಿ ಆಟೋರಿಕ್ಷಾದಲ್ಲಿ ಪ್ರೆಷರ್ ಕುಕ್ಕರ್ ಬಾಂಬ್ ಸ್ಫೋಟಿಸಿದೆ. ಮಂಗಳೂರು ಆಟೋರಿಕ್ಷಾ ಸ್ಫೋಟ ತನಿಖೆ ಮುಂದುವರಿದಂತೆ ಇನ್ನಷ್ಟು ಸಾಮ್ಯತೆಗಳು ಬೆಳಕಿಗೆ ಬರಬಹುದು.
ಕೊಯಮತ್ತೂರಿನಲ್ಲಿ ಏನಾಗಿತ್ತು?
ಅಕ್ಟೋಬರ್ 23ರಂದು ಸಂಗಮೇಶ್ವರ ದೇವಾಲಯದ ಮುಂದೆ ಕಾರ್ ಸ್ಫೋಟವಾಗಿತ್ತು. ಚಾಲಕ ಜಮೇಶಾ ಮುಬಿನ್ ಮೃತಪಟ್ಟಿದ್ದ. ಮೊದಲಿಗೆ ಇದೊಂದು ಆಕಸ್ಮಿಕ ಸ್ಫೋಟ ಎಂದು ಭಾವಿಸಲಾಗಿತ್ತು. ಆದರೆ, ತನಿಖೆ ಮುಂದುವರಿದಂತೆ ಭಯೋತ್ಪಾದನಾ ಕೃತ್ಯ ಎಂಬುದು ತನಿಖಾ ಸಂಸ್ಥೆಗಳಿಗೆ ಮನವರಿಕೆಯಾಯಿತು. ಸ್ಫೋಟದಲ್ಲಿ ಮೃತಪಟ್ಟ ಮುಬಿನ್ ವಾಸ್ತವದಲ್ಲಿ ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ. 2019ರಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಐಸಿಸ್ ಸಂಪರ್ಕದ ಸಂಬಂಧ ಇದೇ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದವು.
ಈ ಸ್ಫೋಟದಲ್ಲಿ ಮೃತಪಟ್ಟ ಮುಬಿನ್ ಮನೆಯಿಂದ, ನಾಡ ಬಾಂಬ್ ತಯಾರಿಸಲು ಬೇಕಾದ ಪೊಟ್ಯಾಷಿಯಮ್ ನೈಟ್ರೇಟ್, ಅಲ್ಯುಮಿನಿಯಂ ಪುಡಿ, ಇದ್ದಿಲು ಮತ್ತು ಸಲ್ಫರ್ ಸೇರಿದ ಇನ್ನಿತರ ಕಚ್ಚಾವಸ್ತುಗಳನ್ನು ಪೊಲೀಸರು ಜಫ್ತಿ ಮಾಡಿದ್ದರು. ಸ್ಫೋಟದ ಸ್ಥಳದಿಂದಲೂ ಪೊಟ್ಯಾಷಿಯಂ ನೈಟ್ರೆಟ್, ಸಲ್ಫರ್ ಸಂಗ್ರಹಿಸಲಾಗಿತ್ತು.
ಸ್ಫೋಟ ಸಂಭವಿಸುವ ಕೆಲವು ಗಂಟೆಗಳಿಗೆ ಮೊದಲು ಮುಬಿನ್ ಹಾಗೂ ಮತ್ತಿತರು ಅನುಮಾನಾಸ್ಪದ ವಸ್ತುವನ್ನು ತೆಗೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯ ದೃಶ್ಯಗಳು ಆ ವೇಳೆ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಮುಬಿನ್ ಸಹವರ್ತಿಗಳನ್ನು ವಿಚಾರಣೆಗೊಳಪಡಿಸಿದ್ದರು. ಅಂತಿಮವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳೆಂಟು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಭಯೋತ್ಪಾದನಾ ಕೃತ್ಯ ಎಂಬುದು ಸಾಬೀತಾಗಿತ್ತು.
ಇದನ್ನೂ ಓದಿ | Coimbatore Car Blast | ಕೊಯಮತ್ತೂರು ಸ್ಫೋಟಕ್ಕೆ ಉಗ್ರ ಲಿಂಕ್; 45 ಪ್ರದೇಶಗಳಲ್ಲಿ ಎನ್ಐಎ ರೇಡ್