ನವ ದೆಹಲಿ: ಒಂದು ಕೆಜಿಯಷ್ಟು ಗಾಂಜಾವನ್ನು ಕಳ್ಳ ಸಾಗಣೆ (Cannabis Smuggling) ಮಾಡಲು ಸಂಚು ರೂಪಿಸಿದ್ದ ಆರೋಪದಡಿ 46ವರ್ಷದ ಭಾರತ ಮೂಲದ ವ್ಯಕ್ತಿಯನ್ನು ಸಿಂಗಾಪುರನಲ್ಲಿ ಗಲ್ಲಿಗೇರಿಸಲಾಗಿದೆ. ಇಲ್ಲಿನ ಚಾಂಗಿ ಜೈಲು ಸೇರಿದ್ದ ತಂಗರಾಜು ಸುಪ್ಪಯ್ಯ ಎಂಬಾತನನ್ನು ಇಂದು ನೇಣುಗಂಬಕ್ಕೆ ಏರಿಸಲಾಗಿದೆ. ‘ಇವನ ವಿರುದ್ಧ ಮಾದಕ ವಸ್ತುಗಳ ಸಾಗಣೆಯ ಸಂಚಿನ ಆರೋಪ ಸಾಬೀತಾಗಿದೆ. ಹೀಗಾಗಿ ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಮುನ್ನ ಇನ್ನೊಮ್ಮೆ ಪರಿಶೀಲನೆ ಮಾಡಬೇಕು, ನೇಣಿಗೇರಿಸುವುದು ಸೂಕ್ತವಾ ಎಂದು ಮತ್ತೊಂದು ಸಲ ವಿಮರ್ಶೆ ಮಾಡಬೇಕು ಎಂದು ಸಿಂಗಾಪುರ್ ಸರ್ಕಾರಕ್ಕೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿ ಹಲವು ಅಂತಾರಾಷ್ಟ್ರೀಯ ಸಂಘ-ಸಂಸ್ಥೆಗಳು ಒತ್ತಾಯಿಸಿದ್ದವು. ಆದರೆ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಸುಪ್ಪಯ್ಯನನ್ನು ಗಲ್ಲಿಗೇರಿಸಲಾಗಿದೆ.
2017ನೇ ಇಸ್ವಿಯಲ್ಲಿ, 1,017.9 ಗ್ರಾಂ.ಗಳಷ್ಟು ಗಾಂಜಾವನ್ನು ಕಳ್ಳಸಾಗಣೆ ಮಾಡಲು ಕುಮ್ಮಕ್ಕು ನೀಡಿದ ಆರೋಪದಡಿ ತಂಗರಾಜು ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಸಿಂಗಾಪುರ್ನಲ್ಲಿ ಮರಣ ದಂಡನೆಗೆ ಪರಿಗಣಿತವಾಗುವ ಕನಿಷ್ಠ ಅಪರಾಧಕ್ಕಿಂತಲೂ ತಂಗರಾಜು ದ್ವಿಗುಣ ಅಪರಾಧ ಮಾಡಿದ್ದರಿಂದ 2018ರಲ್ಲಿ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ತಂಗರಾಜು ಈ ಮರಣದಂಡನೆ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಆ ಮನವಿ ತಿರಸ್ಕರಿಸಲ್ಪಟ್ಟು, ಶಿಕ್ಷೆ ಅಂತಿಮವಾಗಿತ್ತು.
ಇನ್ನು ತಂಗರಾಜುನನ್ನು ನೇಣಿಗೆ ಏರಿಸಿದ್ದನ್ನು ಬ್ರಿಟಿಷ್ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರು ಖಂಡಿಸಿದ್ದಾರೆ. ಜಿನಿವಾ ಮೂಲದ, ಡ್ರಗ್ ಪಾಲಿಸಿಗೆ ಸಂಬಂಧಪಟ್ಟ ಜಾಗತಿಕ ಆಯೋಗದ ಸದಸ್ಯರಾಗಿರುವ ಅವರು ತಮ್ಮ ಬ್ಲಾಗ್ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ. ‘ತಂಗರಾಜು ಪೊಲೀಸರಿಗೆ ಸಿಕ್ಕಿಬಿದ್ದಾಗ ಆತನ ಬಳಿ ಮಾದಕವಸ್ತು ಇರಲಿಲ್ಲ. ಒಬ್ಬ ಅಮಾಯಕನನ್ನು ಸಿಂಗಾಪುರ ನೇಣಿಗೆ ಏರಿಸಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Manipal Hospitals : ಮಣಿಪಾಲ್ ಹಾಸ್ಪಿಟಲ್ಸ್ ಸರಣಿ ಆಸ್ಪತ್ರೆಗಳನ್ನು ಖರೀದಿಸಿದ ಸಿಂಗಾಪುರದ ಟೆಮಾಸೆಕ್ ಹೋಲ್ಡಿಂಗ್ಸ್: ವರದಿ
ಆದರೆ ತಂಗರಾಜುವನ್ನು ನೇಣಿಗೆ ಏರಿಸಿದ್ದನ್ನು ಸಿಂಗಾಪುರ ಗೃಹ ಇಲಾಖೆ ಸಮರ್ಥನೆ ಮಾಡಿಕೊಂಡಿದೆ. ಕಿಂಚಿತ್ತೂ ಅನುಮಾನವಿಲ್ಲದೆ ತಂಗರಾಜು ಅಪರಾಧ ಸಾಬೀತಾಗಿದ್ದರಿಂದಲೇ ಮರಣದಂಡನೆ ವಿಧಿಸಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಈತನಿಂದ ಎರಡು ಮೊಬೈಲ್ ನಂಬರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳ ಸಾಗಣೆ-ವಿತರಣೆಗೆ ಸಂಬಂಧಪಟ್ಟಂತೆ ಖರೀದಿಸುವವರು ಮತ್ತು ಕೊಡುವವರ ಜತೆ ಸಮನ್ವಯ ಸಂಪರ್ಕಿಸಲು ಆತ ಇದೇ ನಂಬರ್ ಬಳಕೆ ಮಾಡುತ್ತಿದ್ದ ಎಂದೂ ಸಚಿವಾಲಯ ತಿಳಿಸಿದೆ. ಮಾದಕ ವಸ್ತು ಸಾಗಣೆಯನ್ನು ಸಿಂಗಾಪುರ ಗಂಭೀರ ಅಪರಾಧವೆಂದು ಪರಿಗಣಿಸಿ, ಅದರ ನಿಯಂತ್ರಣಕ್ಕೆ ಮರಣದಂಡನೆಯೇ ತಕ್ಕ ಉತ್ತರ ಎಂದು ಪ್ರತಿಪಾದಿಸುತ್ತಿದೆ.