ನವದೆಹಲಿ: ಬಾಲಿವುಡ್ ಸಿಂಗರ್ ಲಕ್ಕಿ ಅಲಿ (Singer Lucky Ali) ಅವರು ಹಿಂದೂಗಳ ಕ್ಷಮೆ ಕೇಳಿದ್ದಾರೆ. ಅಬ್ರಾಮ್ (Abram) ಪದದಿಂದಲೇ ಬ್ರಾಹ್ಮಣ (Brahman) ಪದ ಉತ್ಪತ್ತಿಯಾಗಿದೆ ಎಂದು ವಿವಾದಾತ್ಮಕ ಪೋಸ್ಟ್‌ವನ್ನು (Facebook Post) ಅವರು ಫೇಸ್‌ಬುಕ್‌ನಲ್ಲಿ ಷೇರ್ ಮಾಡಿದ್ದರು. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಕ್ಷಮೆ ಕೇಳಿದ್ದಾರೆ. ಜತೆಗೆ, ತಮ್ಮ ಫೇಸ್‌ಬುಕ್ ಪೋಸ್ಟ್ ಕೂಡ ಅವರು ಡಿಲಿಟ್ ಮಾಡಿದ್ದಾರೆ.
ಬ್ರಾಹ್ಮಣ ಎಂಬ ಹೆಸರು ‘ಬ್ರಹ್ಮ’ ದಿಂದ ಬಂದಿದೆ. ಆದರೆ, ಅದು ‘ಅಬ್ರಾಮ್’ ನಿಂದ ಬಂದಿದೆ. ಅಬ್ರಾಮ್ ಪದ ಅಬ್ರಹಾಂ ಅಥವಾ ಇಬ್ರಾಹಿಂನಿಂದ ಬಂದಿದೆ. ಬ್ರಾಹ್ಮಣರು ಇಬ್ರಾಹಿಂನ ವಂಶಸ್ಥರು. ಅಲೈಹಿಸಲಂ … ಎಲ್ಲಾ ರಾಷ್ಟ್ರಗಳ ಪಿತಾಮಹ … ಆದ್ದರಿಂದ ಎಲ್ಲರೂ ಏಕೆ ತಮ್ಮ ತಮ್ಮೊಳಗೆ ತಾರ್ಕಿಕವಾಗಿ ವಾದ ಮಾಡದೆ ಸುಮ್ಮನೆ ಜಗಳವಾಡುತ್ತಿದ್ದೀರಾ ಎಂದು ಫೇಸ್‌ಬುಕ್‌ನಲ್ಲಿ ಲಕ್ಕಿ ಅಲಿ ಅವರು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ 64 ವರ್ಷದ ಲಕ್ಕಿ ಅಲಿ ಅವರು ತಮ್ಮ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಾವು ಹಾಕಿದ ಪೋಸ್ಟ್‌ನ ಉದ್ದೇಶವು ಯಾರಿಗಾದರೂ ಹಾನಿ ಮಾಡುವುದಾಗಲೀ ಅಥವಾ ಆಕ್ರೋಶವನ್ನುಂಟು ಮಾಡುವುದಾಗಲೀ ಆಗಿರಲಿಲ್ಲ. ಇದರ ಬದಲಿಗೆ ಎಲ್ಲರನ್ನು ಒಂದುಗೂಡಿಸುವ ಉದ್ದೇಶವಿತ್ತು ಎಂದು ಹೇಳಿಕೊಂಡಿದ್ದಾರೆ.
ಲಕ್ಕಿ ಅಲಿ ಕ್ಷಮೆ ಕೋರಿರುವ ಪೋಸ್ಟ್‌ನಲ್ಲಿ ಏನಿದೆ?
ಪ್ರಿಯರೇ, ನನ್ನ ಕೊನೆಯ ಪೋಸ್ಟ್‌ನ ವಿವಾದವನ್ನು ನಾನು ಅರಿತುಕೊಂಡಿದ್ದೇನೆ. ನನ್ನ ಉದ್ದೇಶವು ಯಾರ ನಡುವೆಯೂ ನೋವು ಅಥವಾ ಕೋಪವನ್ನು ಉಂಟುಮಾಡುವು ಆಗಿರಲಿಲ್ಲ. ಇದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ನನ್ನ ಉದ್ದೇಶವು ಹತ್ತಿರಕ್ಕೆ ತರುವುದು ಆಗಿತ್ತು. ಆದರೆ ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ಅದು ಜನರನ್ನು ತಲುಪಲಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಏನು ಪೋಸ್ಟ್ ಮಾಡುತ್ತಿದ್ದೇನೆ ಮತ್ತು ನಾನು ಬಳಸಿರುವ ಪದಗಳ ಬಗ್ಗೆ ನಾನು ಹೆಚ್ಚು ತಿಳಿದಿರುತ್ತೇನೆ. ಅದು ನನ್ನ ಅನೇಕ ಹಿಂದೂ ಸಹೋದರರು ಮತ್ತು ಸಹೋದರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: ಜಮೀನು ಕಬಳಿಸಲು ಪತಿಗೆ ಸಹಾಯ: IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್ ಗಾಯಕ ಗಂಭೀರ ಆರೋಪ
ಯಾರು ಈ ಲಕ್ಕಿ ಅಲಿ?
ಗೀತ ರಚನಾಕಾರರು ಆಗಿರುವ ಗಾಯಕ ಲಕ್ಕಿ ಅಲಿ ಅವರು ಬಾಲಿವುಡ್ ನಟ ಮೆಹಮೂದ್ ಅಲಿ ಅವರು 8 ಪುತ್ರರ ಪೈಕಿ ಎರಡನೆಯವರಾಗಿದ್ದಾರೆ. ತಾಯಿ ಮಹೆಲಾಕಾ. ಇವರು ಖ್ಯಾತ ನಟಿ ಮೀನಾಕುಮಾರಿ ಅವರ ಸಹೋದರಿ. ಲಕ್ಕಿ ಅಲಿ ತಮ್ಮ ಗಾಯನಗಳಿಂದ ಪ್ರಸಿದ್ಧರಾಗಿದ್ದಾರೆ. ವಿಶೇಷವಾಗಿ ಇಂಡಿಪಾಪ್‌ನಲ್ಲಿ ಅವರು ಪ್ರಸಿದ್ಧರು. 1990ರ ದಶಕದಲ್ಲಿ ಅವರ ಬಹಳಷ್ಟು ಆಲ್ಬಮ್‌ಗಳು ಹಿಟ್ ಆಗಿವೆ. ಬೆಂಗಳೂರಿನ ಬಿಶಪ್ ಕಾಟನ್ ಬಾಯ್ಸ್ ಸ್ಕೂಲ್‌ನಲ್ಲಿ ಓದಿದ್ದಾರೆ.