Site icon Vistara News

Single Document: ನಾಳೆಯಿಂದ ಒಂದು ದೇಶ, ಒಂದೇ ದಾಖಲೆ! ಆಧಾರ್‌ನಿಂದ ಡಿಎಲ್‌ವರೆಗೆ ಎಲ್ಲಾ ಮಾಡಿಸಲು ಅ.1ರಿಂದ ಇದೊಂದೇ ಸಾಕು!

birth certificate

ಬೆಂಗಳೂರು: ಹೊಸ ಆಧಾರ್‌ ಕಾರ್ಡ್‌ (Aadhaar Card) ಮಾಡಿಸಲು ಹೋದಾಗ ಒಂದು ಡಾಕ್ಯುಮೆಂಟ್‌ ಕೇಳುತ್ತಾರೆ, ವಾಹನ ಚಾಲನಾ ಪರವಾನಿಗೆ (Driving license) ಪಡೆಯಲು ಹೋದರೆ ಅವರು ಬೇರೊಂದು ದಾಖಲೆ ಬೇಕು ಎನ್ನುತ್ತಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ದಾಖಲೆ ಕೇಳಿದರೆ ಸಹಜವಾಗಿಯೇ ಕಿರಿಕಿರಿ ಆಗುತ್ತದೆ. ಮೇಲಾಗಿ ಎಲ್ಲಿಗೆ ಯಾವ ದಾಖಲೆ ಕೊಂಡೊಯ್ಯಬೇಕು ಎಂಬ ಗೊಂದಲ ಕಾಡುತ್ತದೆ. ಆದರೆ, ಅಕ್ಟೋಬರ್‌ 1ರಿಂದ ಜನರಿಗೆ ಈ ಗೊಂದಲ ಇರುವುದಿಲ್ಲ. ಬಹುತೇಕ ದಾಖಲೆ ಪಡೆಯಲು (Single Document) ಇನ್ನು ಮುಂದೆ ‘ಜನನ ಪ್ರಮಾಣಪತ್ರ’ ಒಂದೇ (Birth Certificate) ಸಾಕಾಗುತ್ತದೆ.

ಹೌದು, ಜನನ ಹಾಗೂ ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ (2023)ಯು ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ. ಕಾಯ್ದೆ ಜಾರಿಯಾದಾಗಿನಿಂದ ದೇಶದಲ್ಲಿ ಹಲವು ದಾಖಲೆ ಪಡೆಯಲು ಒಂದೇ ದಾಖಲೆ ನೀಡಬಹುದಾಗಿದೆ. ಜನನ ಪ್ರಮಾಣಪತ್ರ ಒಂದನ್ನು ನೀಡುವ ಮೂಲಕ ಬೇರೆ ದಾಖಲೆಗಳನ್ನು ಪಡೆಯಬಹುದಾಗಿದೆ. ಇದರಿಂದ ದೇಶದ ಕೋಟ್ಯಂತರ ಜನ ಒಂದೇ ಪ್ರಮಾಣಪತ್ರ ನೀಡಿ, ಬೇರೆ ಬೇರೆ ದಾಖಲೆ ಪಡೆಯಲು ಅನುಕೂಲವಾಗಲಿವೆ.

ಯಾವೆಲ್ಲ ದಾಖಲೆ ಪಡೆಯಬಹುದು?

ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ವಾಹನ ಚಾಲನಾ ಪರವಾನಗಿ, ಮತಪಟ್ಟಿಯಲ್ಲಿ ಹೆಸರು ಸೇರಿಸುವುದು, ಆಧಾರ್‌, ವಿವಾಹ ನೋಂದಣ, ಸರ್ಕಾರಿ ಉದ್ಯೋಗ ಸೇರಿ ಯಾವುದೇ ದಾಖಲೆ ಪಡೆಯಲು ಜನನ ಪ್ರಮಾಣಪತ್ರವನ್ನು ಏಕ ದಾಖಲೆಯಾಗಿ ಬಳಸಬಹುದಾಗಿದೆ. ಡಿಜಿಟಲ್‌ ನೋಂದಣಿಗೆ ಆದ್ಯತೆ, ಸಾರ್ವಜನಿಕ ಸೇವೆಗಳು ಜನರಿಗೆ ಸರಿಯಾಗಿ ತಲುಪಲಿ ಹಾಗೂ ಸಾಮಾಜಿಕ ಪಾರದರ್ಶಕತೆ ಕಾಪಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಜನನ ಹಾಗೂ ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಹಾಗಾಗಿ, ಅಕ್ಟೋಬರ್‌ 1ರಿಂದ ಹೊಸ ನಿಯಮ ಅನ್ವಯವಾಗಲಿದೆ.

ಕಳೆದ ತಿಂಗಳು ಮುಕ್ತಾಯವಾದ ಸಂಸತ್‌ ಮುಂಗಾರು ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿಯ ವಿಧೇಯಕಕ್ಕೆ ಸಂಸತ್ತಿನ ಉಭಯ ಸದನಗಳು ಅಂಗೀಕಾರ ನೀಡಿವೆ. 1969ರಲ್ಲಿ ಜಾರಿಗೆ ಬಂದ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ನಿತ್ಯಾನಂದ ರೈ ಅವರು ವಿಧೇಯಕವನ್ನು ಮಂಡಿಸಿದ್ದರು. ಲೋಕಸಭೆಯಲ್ಲಿ ಆಗಸ್ಟ್‌ 1 ಹಾಗೂ ರಾಜ್ಯಸಭೆಯಲ್ಲಿ ಆಗಸ್ಟ್‌ 7ರಂದು ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿತ್ತು.

ಇದನ್ನೂ ಓದಿ: Single Document: ಆಧಾರ್‌ನಿಂದ ಡಿಎಲ್‌ವರೆಗೆ; ಅ.1ರಿಂದ ಎಲ್ಲದಕ್ಕೂ ಇದೊಂದೇ ಡಾಕ್ಯುಮೆಂಟ್‌ ಸಾಕು!

Exit mobile version