Site icon Vistara News

Morbi Bridge Collapse: ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ವೆಲ್ಡಿಂಗ್ ಮಾಡಿದ್ದೇ ತಪ್ಪಾಯಿತಾ? ಎಸ್ಐಟಿ ವರದಿಯಲ್ಲಿ ಏನಿದೆ?

SIT submitted its report on Morbi Bridge Collapse

ಮೋರ್ಬಿ, ಗುಜರಾತ್: 135 ಜನರ ಸಾವಿಗೆ ಕಾರಣವಾಗಿದ್ದ ಮೋರ್ಬಿ ತೂಗು ಸೇತುವೆ (Morbi Hanging Bridge) ಕುಸಿತ ಪ್ರಕರಣ ಕುರಿತ ತನಿಖೆಗೆ ನೇಮಕವಾಗಿದ್ದ ವಿಶೇಷ ತನಿಖಾ ತಂಡ(SIT)ವು ತನ್ನ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದೆ. ಹಲವು ಅಚ್ಚರಿ ಸಂಗತಿಗಳು ವಿಚಾರಣೆ ವೇಳೆ ತಿಳಿದು ಬಂದಿವೆ. ಸೇತುವೆಯ ಒಟ್ಟು ಕೇಬಲ್‌ನಲ್ಲಿ ಸುಮಾರು ಅರ್ಧದಷ್ಟು ತಂತಿಗಳಲ್ಲಿ ತುಕ್ಕು ಹಿಡಿದಿರುವುದು ಮತ್ತು ಹಳೆಯ ಸಸ್ಪೆಂಡರ್‌ಗಳನ್ನು ಹೊಸದರೊಂದಿಗೆ ವೆಲ್ಡಿಂಗ್ ಮಾಡಿರುವುದು ಸೇತುವೆಯ ಕುಸಿತಕ್ಕೆ ಕಾರಣವಾದ ಪ್ರಮುಖ ಸಂಗತಿಗಳಾಗಿವೆ. ಕಳೆದ ವರ್ಷ ನಡೆದ ಈ ಸೇತುವೆ ದುರಂತವು ಭಾರೀ ಸಂಚಲನಕ್ಕೆ ಕಾರಣಾಗಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರವು ವಿಶೇಷ ತನಿಖಾ ತಂಡವನ್ನು ನಿಯೋಜಿಸಿತ್ತು. ಇದೀಗ ಪ್ರಾಥಮಿಕ ವರದಿಯನ್ನು ಮೋರ್ಬಿ ಮುನ್ಸಿಪಾಲಿಟಿಯೊಂದಿಗೆ ಹಂಚಿಕೊಳ್ಳಲಾಗಿದೆ(Morbi Bridge Collapse).

ಬ್ರಿಟಿಷ್ ಕಾಲದ ಈ ತೂಗು ಸೇತುವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿ.(ಒರೆವಾ ಗ್ರೂಪ್) ಕಂಪನಿಗೆ ವಹಿಸಲಾಗಿತ್ತು. ಆದರೆ, ಕಂಪನಿಯು ತನ್ನ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಸೇತುವೆಯ ದುರಸ್ತಿ, ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಹಲವು ಲೋಪಗಳನ್ನು ಎಸ್‌ಐಟಿ ಪತ್ತೆ ಮಾಡಿದೆ. ಕಂಪನಿಯ ಬೇಜವಾಬ್ದಾರಿಯ ಸೇತುವೆ ಕುಸಿತಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿಶೇಷ ತನಿಖಾ ತಂಡದಲ್ಲಿ ಐಎಎಸ್ ಅಧಿಕಾರಿ ರಾಜ್‌ಕುಮಾರ್ ಬೇನಿವಾಲ್, ಐಪಿಎಸ್ ಅಧಿಕಾರಿ ಸುಭಾಷ್ ತ್ರಿವೇದಿ, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ ಕಾರ್ಯದರ್ಶಿ ಮತ್ತು ಮುಖ್ಯ ಎಂಜಿನಿಯರ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರು ಇದ್ದರು.

ವೆಲ್ಡಿಂಗ್ ಮಾಡಿದ್ದೇ ತಪ್ಪಾಯಿತಾ?

ಮೋರ್ಬಿ ತೂಗು ಸೇತುವೆಯ ನವೀಕರಣದ ವೇಳೆ ಹಳೆಯ ಸಸ್ಪೆಂಡರ್‌ಗಳನ್ನು (ಪ್ಲಾಟ್‌ಫಾರ್ಮ್ ಡೆಕ್‌ನೊಂದಿಗೆ ಕೇಬಲ್ ಅನ್ನು ಸಂಪರ್ಕಿಸುವ ಸ್ಟೀಲ್ ರಾಡ್‌ಗಳು) ಹೊಸ ಸಸ್ಪೆಂಡರ್‌ಗಳೊಂದಿಗೆ ವೆಲ್ಡಿಂಗ್ ಮಾಡಲಾಗಿದೆ. ಆದ್ದರಿಂದ ಸಸ್ಪೆಂಡರ್‌ಗಳ ನಡವಳಿಕೆಯು ಬದಲಾಗಿದೆ. ಈ ರೀತಿಯ ಸೇತುವೆಗಳಲ್ಲಿ, ಸಿಂಗಲ್ ರಾಡ್ ಸಸ್ಪೆಂಡರ್‌ಗಳು ಇರಬೇಕು. ಆಗ ಹೊರೆಯನ್ನು ಹೊರಲು ಅವುಗಳಿಗೆ ಸಾಧ್ಯವಾಗುತ್ತದೆ ಎಂದು ಎಸ್ಐಟಿ ತನ್ನ ವರದಿಯಲ್ಲಿ ತಿಳಿಸಿದೆ. ವೆಲ್ಡಿಂಗ್ ಮಾಡಿರುವುದು ಸೇತುವೆಯ ಕುಸಿತಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Morbi Bridge Collapse | ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಫಿಟ್ನೆಸ್‌ ಸರ್ಟಿಫಿಕೇಟ್ ಇರಲಿಲ್ಲವೇ?

ಸಾಮಾನ್ಯ ಮಂಡಳಿಯ ಒಪ್ಪಿಗೆ ಇಲ್ಲದೇ ಗುತ್ತಿಗೆ

ಎಲ್ಲಕ್ಕಿಂತ ಹೆಚ್ಚಾಗಿ, ಮುನ್ಸಿಪಾಲಿಟಿಯ ಸಾಮಾನ್ಯ ಮಂಡಳಿಯ ಒಪ್ಪಿಗೆ ಇಲ್ಲದೇ ಒರೆವಾ ಗ್ರೂಪ್‌ಗೆ ತೂಗು ಸೇತುವೆಯ ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಗಿತ್ತು. ಮಾರ್ಚ್ 2022ರಲ್ಲಿ ಸ್ಥಗಿತವಾಗಿದ್ದ ಈ ಸೇತುವೆಯನ್ನು 2022 ಅಕ್ಟೋಬರ್ 22ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಸಾರ್ವಜನಿಕರಿಗೆ ಮುಕ್ತಗೊಳಿಸುವ ಮುನ್ನ ಯಾವುದೇ ಪರೀಕ್ಷೆಯಾಗಲಿ ಅಥವಾ ನಗರಸಭೆಯಿಂದ ಒಪ್ಪಿಗೆಯನ್ನು ಪಡೆದುಕೊಂಡಿರಲಿಲ್ಲ ಎಂಬ ಲೋಪವನ್ನು ವರದಿಯಲ್ಲಿ ತಿಳಿಸಲಾಗಿದೆ.

Exit mobile version