Site icon Vistara News

Slowest Traffic: ದೇಶದಲ್ಲಿ ಅತೀ ನಿಧಾನ ಟ್ರಾಫಿಕ್‌ ಇರುವ ನಗರಗಳು; ನೀವು ಊಹಿಸಿದ್ಯಾವುದೂ ಅಲ್ಲ!

Bengaluru traffic

Bengaluru drops to 6th place in 2023 from 2nd place in 2022 in global traffic congestion ranking

ಹೊಸದಿಲ್ಲಿ: ದೇಶದಲ್ಲಿ ಅತೀ ಸ್ಲೋ ಟ್ರಾಫಿಕ್‌ (Slowest Traffic) ಇರುವ ಮೂರು ನಗರ ಎಂದ ಕೂಡಲೇ ದೆಹಲಿ, ಮುಂಬಯಿ ಅಥವಾ ಬೆಂಗಳೂರು ಎಂದು ನೀವು ಕಣ್ಣು ರೆಪ್ಪೆ ಮುಚ್ಚಿ ಬಿಡುವುದರೊಳಗೆ ಘೋಷಿಸಬಹುದು. ಆದರೆ ಅದ್ಯಾವುದೂ ಅಲ್ಲ ಎಂದು ಹೇಳುತ್ತಿದೆ ಈ ಅಧ್ಯಯನ.

ಹಾಗಾದರೆ ಆ ಮೂರು ನಗರಗಳು ಯಾವುವು? ವರದಿಯ ಪ್ರಕಾರ, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಮಹಾರಾಷ್ಟ್ರದ ಭಿವಂಡಿ ಮತ್ತು ಬಿಹಾರದ ಅರಾಹ್ ವಿಶ್ವದ ಅತ್ಯಂತ ನಿಧಾನವಾದ ಟ್ರಾಫಿಕ್ ಹೊಂದಿರುವ ಟಾಪ್ 10 ನಗರಗಳ ಪಟ್ಟಿಯಲ್ಲಿ ಸೇರಿವೆ. ಯಾವುದೀ ವರದಿ? ಅಮೆರಿಕ ಮೂಲದ ಸಂಶೋಧನಾ ಸಂಸ್ಥೆಯಾದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ (NBER) ಎಂಬ ಲಾಭರಹಿತ ಸಂಸ್ಥೆ ಈ ಅಧ್ಯಯನ ನಡೆಸಿದೆ. ಇತ್ತೀಚಿನ ಈ ಅಧ್ಯಯನದಲ್ಲಿ, ನಿಧಾನಗತಿಯ ಟ್ರಾಫಿಕ್ ಹೊಂದಿರುವ ವಿಶ್ವದ ಟಾಪ್ 10 ನಗರಗಳಲ್ಲಿ ಈ ಮೂರು ಭಾರತೀಯ ನಗರಗಳು ಸೇರಿವೆ.

NBER ಅಧ್ಯಯನವು 152 ದೇಶಗಳ 1,200ಕ್ಕೂ ಹೆಚ್ಚು ನಗರಗಳನ್ನು ಒಳಗೊಂಡಿದೆ. “ದಿ ಫಾಸ್ಟ್, ದಿ ಸ್ಲೋ ಅಂಡ್ ದಿ ಕಂಜೆಸ್ಟೆಡ್: ಶ್ರೀಮಂತ ಮತ್ತು ಬಡ ದೇಶಗಳಲ್ಲಿ ನಗರ ಸಾರಿಗೆ” ಎಂಬ ಶೀರ್ಷಿಕೆಯ ವರದಿಯ ಪ್ರಕಾರ ಮೋಟಾರು ವಾಹನಗಳ ಸರಾಸರಿ ಪ್ರಯಾಣದ ವೇಗ ಯುಎಸ್‌ಎಯ ಮಿಚಿಗನ್‌ನ ಫ್ಲಿಂಟ್‌ನಲ್ಲಿ ಅತ್ಯಧಿಕವಾಗಿದೆ. ಅತ್ಯಂತ ನಿಧಾನಗತಿಯ ಟ್ರಾಫಿಕ್‌ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿದೆ. ಮತ್ತು ಅತೀ ಹೆಚ್ಚು ವಾಹನ ದಟ್ಟಣೆಯು ಕೊಲಂಬಿಯಾದ ಬೊಗೋಟಾದಲ್ಲಿದೆ.

ಡೇಟಾ ಪ್ರಕಾರ, ವೇಗ ಸೂಚ್ಯಂಕದಲ್ಲಿ ವಿಶ್ವದ 20 ನಿಧಾನಗತಿಯ ನಗರಗಳಲ್ಲಿ ಭಿವಂಡಿ 5ನೇ ಸ್ಥಾನದಲ್ಲಿದೆ. 6ನೇ ಸ್ಥಾನದಲ್ಲಿ ಕೋಲ್ಕತ್ತಾ, ನಂತರ 7ನೇ ಸ್ಥಾನದಲ್ಲಿ ಅರಾಹ್‌ ಇವೆ. 11ನೇ ಸ್ಥಾನದಲ್ಲಿ ಬಿಹಾರದ ಷರೀಫ್, 13ನೇ ಸ್ಥಾನದಲ್ಲಿ ಮುಂಬಯಿ, 18ನೇ ಸ್ಥಾನದಲ್ಲಿ ಐಜ್ವಾಲ್ ಇವೆ. ಅಚ್ಚರಿಯ ಸಂಗತಿ ಎಂದರೆ ಬೆಂಗಳೂರು 19ನೇ ಸ್ಥಾನದಲ್ಲಿದ್ದು, ಶಿಲ್ಲಾಂಗ್ 20ನೇ ಸ್ಥಾನದಲ್ಲಿದೆ.

NBER ಸಂಶೋಧಕರು ತಮ್ಮ ಮಾದರಿಗಾಗಿ 1,228 ನಗರಗಳಿಂದ 58.29 ಕೋಟಿ ನಿದರ್ಶನಗಳನ್ನು ಸಂಗ್ರಹಿಸಿದ್ದಾರೆ. ಮೂರು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾದ ಭಾರತ, ಯುಎಸ್ ಮತ್ತು ಇಂಡೋನೇಷ್ಯಾಗಳಿಂದ ನಾವು ಕ್ರಮವಾಗಿ 173, 121 ಮತ್ತು 29 ನಗರಗಳಿಂದ 6.6 ಕೋಟಿ, 5.7 ಕೋಟಿ ಮತ್ತು 1.3 ಕೋಟಿ ಟ್ರಿಪ್ ನಿದರ್ಶನಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: Highway Road : ಹೈವೇನಲ್ಲಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಹುಷಾರ್‌; ಇನ್ಮುಂದೆ ವಿಡಿಯೊದಲ್ಲಿ ಸಿಕ್ಕಿಬಿಳ್ತಿರಿ!

Exit mobile version