ನವ ದೆಹಲಿ: ಬಹುಮಹಡಿ ಕಟ್ಟಡಗಳಿದ್ದಲ್ಲಿ ಲಿಫ್ಟ್ ಅತ್ಯಗತ್ಯ. ಅಪಾರ್ಟ್ಮೆಂಟ್ಗಳಲ್ಲೆಲ್ಲ ಬಳಕೆ ಅನಿವಾರ್ಯ. ಈ ಲಿಫ್ಟ್ಗಳಿಂದ ಉಪಯೋಗ ಇರುವುದು ಸತ್ಯವಾದರೂ, ಅಪಾಯವೂ ಕಟ್ಟಿಟ್ಟಬುತ್ತಿ. ಲಿಫ್ಟ್ ಏಕಾಏಕಿ ಕೈಕೊಟ್ಟರೆ, ನಿಂತುಬಿಟ್ಟರೆ ಅದರಲ್ಲಿದ್ದವರು ಪರದಾಡಬೇಕಾಗುತ್ತದೆ. ದೊಡ್ಡವರಾಗಲೀ, ನಾವೆಷ್ಟೇ ಧೈರ್ಯವಂತರಾಗಿರಲಿ ಲಿಫ್ಟ್ನಲ್ಲಿ ಸಿಕ್ಕಿಬಿದ್ದರೆ ಒಂದು ಕ್ಷಣ ಭಯವಾಗಿಯೇ ಆಗುತ್ತದೆ. ಅಂಥದ್ದರಲ್ಲಿ ಮಕ್ಕಳಿಗೆ ಈ ಅನುಭವ ಆದರೆ ಏನಾಗಬೇಡ !
ಗ್ರೇಟರ್ ನೊಯ್ಡಾದ ನಿರಾಲಾ ನಿರಾಲಾ ಆಸ್ಪೈರ್ ಸೊಸೈಟಿ ಅಪಾರ್ಟ್ಮೆಂಟ್ನಲ್ಲಿ 8 ವರ್ಷದ ಹುಡುಗನಿಗೆ ಈ ಭಯಾನಕ ಸನ್ನಿವೇಶ ಎದುರಾಗಿತ್ತು. ಟ್ಯೂಷನ್ನಿಂದ ಮರಳಿದ ಈತ ತನ್ನ ಸೈಕಲ್ನ್ನೂ ಲಿಫ್ಟ್ನಲ್ಲಿ ಇಟ್ಟುಕೊಂಡು, ಗ್ರೌಂಡ್ ಫ್ಲೋರ್ನಿಂದ 14ನೇ ಮಹಡಿಗೆ ಹೋಗುತ್ತಿದ್ದ. ಆದರೆ ನಾಲ್ಕು ಮತ್ತು ಐದನೇ ಮಹಡಿಗಳ ನಡುವೆ ಲಿಫ್ಟ್ ಸುಮಾರು 10 ನಿಮಿಷ ಸಿಲುಕಿಕೊಂಡಿತ್ತು. ಅವನು ಪುಟ್ಟ ಹುಡುಗ. ಬೆನ್ನಿಗೆ ಬ್ಯಾಗ್ ಕೂಡ ಇದೆ. ಲಿಫ್ಟ್ ಸ್ಥಗಿತಗೊಂಡಾಗ ಅವನು ಹಲವು ಸಲ ಎಮರ್ಜನ್ಸಿ ಗುಂಡಿ ಒತ್ತಿದ್ದಾನೆ. ಬಾಗಿಲು ಬಡಿದಿದ್ದಾನೆ. ಕೂಗಿದ್ದಾನೆ. ಹತಾಶೆಯಿಂದ ಸೈಕಲ್ ಮೇಲೆ ಕೂಡ ಗುದ್ದಿದ್ದಾನೆ. ಆದರೂ ಸುಮಾರು 10 ನಿಮಿಷಗಳ ಕಾಲ ಅವನು ಹಾಗೇ ಇರಬೇಕಾಯ್ತು. ಆತ ಎಮರ್ಜನ್ಸಿ ಬಟನ್ ಒತ್ತಿದ್ದಾಗ ಅಲ್ಲಿ ಸಿಸಿಟಿವಿ ರೂಮ್ನಲ್ಲಿ ಕುಳಿತುಕೊಳ್ಳುವ ಸಿಬ್ಬಂದಿ ಸಹಾಯಕ್ಕೆ ಬರಬೇಕಿತ್ತು. ಆದರೆ ಆ ಸಮಯದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಬಾಲಕ ಅಷ್ಟೊತ್ತು ಲಿಫ್ಟ್ನಲ್ಲಿ ಇರಬೇಕಾಯ್ತು. ಬಳಿಕ ಅದೇ ಫ್ಲೋರ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯಾರಿಗೋ, ಲಿಫ್ಟ್ನಲ್ಲಿ ಯಾರೋ ಸಿಲುಕಿಕೊಂಡಿರುವುದು ಗೊತ್ತಾಗಿ ಅವರು ಬಾಗಿಲು ತೆಗೆದು ಬಾಲಕನನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದನ್ನು ನೋಡಿದ ಜನರು ಲಿಫ್ಟ್ ನಿರ್ವಹಣಾ ಸಿಬ್ಬಂದಿಗೆ ಬೈಯುತ್ತಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಹಲವು ಕಡೆಗಳಲ್ಲಿ ಹೀಗೆ ಲಿಫ್ಟ್ ಸಂಬಂಧಿ ಅವಘಡಗಳು ಉಂಟಾಗುತ್ತಿವೆ. ಕೂಡಲೇ ಯಾವುದಾದರೂ ಕಾನೂನು ತಂದು, ಲಿಫ್ಟ್ ಅವಘಡಗಳನ್ನು ತಡೆಗಟ್ಟಿ ಎಂದು ಆಗ್ರಹ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral Video| ಡ್ರೈವ್ ಮಾಡುತ್ತಿದ್ದಾಗಲೇ ಬಸ್ ಚಾಲಕ ಸಾವು; ಸಿಗ್ನಲ್ನಲ್ಲಿ ನಿಂತಿದ್ದವರಿಗೆ ರಭಸದಿಂದ ಡಿಕ್ಕಿ ಹೊಡೆದ ವಾಹನ