ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಜತೆಗೆ 72 ಸಂಸದರು ಕೂಡ ಸಚಿವರಾಗಿ (Modi 3.0 Cabinet) ಪ್ರಮಾಣವಚನ ಸ್ವೀಕರಿಸಿದ್ದಾರೆ. ಯುವ ಸಂಸದರು, ಮೈತ್ರಿ ಪಕ್ಷಗಳ ಸದಸ್ಯರು, ಅನುಭವಿಗಳು ಸೇರಿ ಹಲವು ಮಾನದಂಡಗಳನ್ನು ಅನುಸರಿಸಿ ಸಚಿವ ಸ್ಥಾನ ನೀಡಲಾಗಿದೆ. ಇನ್ನು, ಮೂವರು ಹಾಲಿ ಸಂಪುಟ ದರ್ಜೆ ಸಚಿವರಿಗೆ ನರೇಂದ್ರ ಮೋದಿ ಅವರು ಕೊಕ್ ನೀಡಿದ್ದಾರೆ. ಮೂವರು ಸಚಿವರಲ್ಲಿ ಸ್ಮೃತಿ ಇರಾನಿ (Smriti Irani) ಕೂಡ ಇದ್ದಾರೆ.
2019ರಲ್ಲಿ ರಾಹುಲ್ ಗಾಂಧಿ ವಿರುದ್ಧ ಗೆಲುವು ಸಾಧಿಸಿದ್ದ ಅಮೇಥಿ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಅವರ ವಿರುದ್ಧ ಸ್ಮೃತಿ ಇರಾನಿ ಅವರು 1.6 ಲಕ್ಷ ಮತಗಳಿಂದ ಸೋಲನುಭವಿಸಿದ್ದಾರೆ. ಇವರು ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿದ್ದರು. ಮತ್ತೊಂದೆಡೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಅನುರಾಗ್ ಠಾಕೂರ್ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಹಿಮಾಚಲ ಪ್ರದೇಶ ಹಮೀರ್‌ಪುರ ಕ್ಷೇತ್ರದಲ್ಲಿ ಅನುರಾಗ್ ಠಾಕೂರ್ ಅವರು ಗೆಲುವು ಸಾಧಿಸಿದರೂ ಕೈಬಿಡಲಾಗಿದೆ. ಹಿಮಾಚಲ ಪ್ರದೇಶ ಕೋಟಾದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಂಪುಟ ದರ್ಜೆ ಖಾತೆ ನೀಡಲಾಗಿದೆ.
ಮೋದಿ ಅವರ ಎರಡನೇ ಅವಧಿಯ ಸರ್ಕಾರದಲ್ಲಿ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಖಾತೆ ಸಚಿವರಾಗಿದ್ದ ನಾರಾಯಣ ರಾಣೆ ಅವರಿಗೆ ಕೊಕ್ ನೀಡಲಾಗಿದೆ. ಇವರು ಮಹಾರಾಷ್ಟ್ರದ ರತ್ನಗಿರಿ-ಸಿಂಧುದುರ್ಗ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೂ ಖಾತೆ ನೀಡಿಲ್ಲ. ಇನ್ನು, ಸಹಾಯಕ ಖಾತೆ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್ ಅವರ ಹೆಸರನ್ನೂ ಮೋದಿ ಕೈಬಿಟ್ಟಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ಕೇರಳದ ತಿರುವನಂತಪುರಂನಲ್ಲಿ ಕಾಂಗ್ರೆಸ್‌ನ ಶಶಿ ತರೂರ್ ಅವರಿಗೆ ತೀವ್ರ ಪೈಪೋಟಿ ನೀಡಿ ಸೋಲನುಭವಿಸಿದ್ದರು.
ಹಲವು ಹೊಸಬರಿಗೆ ಈ ಬಾರಿ ಮಣೆ ಹಾಕಲಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್ ಅವರಿಗೆ ರಾಜ್ಯ ಖಾತೆಯ ಉಸ್ತುವಾರಿ ನೀಡಲಾಗಿದೆ. ಜೆಡಿಯು ಸಂಸದ, ನಿತೀಶ್ ಕುಮಾರ್ ಅವರ ನಿಕಟವರ್ತಿಯಾಗಿರುವ ಇವರಿಗೆ ನರೇಂದ್ರ ಮೋದಿ ಅವರು ಮಣೆ ಹಾಕಿದ್ದಾರೆ. ಕರ್ಪೂರಿ ಠಾಕೂರ್ ಅವರಿಗೆ ಪ್ರಸಕ್ತ ವರ್ಷದಲ್ಲಿಯೇ ಕೇಂದ್ರ ಸರ್ಕಾರವು ಮರಣೋತ್ತರವಾಗಿ ಭಾರತರತ್ನ ಘೋಷಿಸಿತ್ತು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಕೇಂದ್ರ ಸಂಪುಟ ದರ್ಜೆ ಸ್ಥಾನ ನೀಡಲಾಗಿದ್ದು, ಇವರು ಶೀಘ್ರದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಎನ್ನಲಾಗುತ್ತದೆ. ಇನ್ನು, ಮಧ್ಯಪ್ರದೇಶ ಸಿಎಂ ಸ್ಥಾನ ತೊರೆದ ಶಿವರಾಜ್ ಸಿಂಗ್ ಚೌಹಾಣ್, ಹರಿಯಾಣ ಮಾಜಿ ಸಿಎಂ ಮನೋಹರ ಲಾಲ್ ಖಟ್ಟರ್, ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರಿಗೆ ಸಂಪುಟ ದರ್ಜೆ ಖಾತೆ ನೀಡಲಾಗಿದೆ. ಕೇರಳ ತ್ರಿಶ್ಶೂರ್ ಸಂಸದ ಸುರೇಶ್ ಗೋಪಿ, ಕರ್ನಾಟಕದ ವಿ.ಸೋಮಣ್ಣ, ತೆಲಂಗಾಣದ ಬಂಡಿ ಸಂಜಯ್ ಕುಮಾರ್ ಸೇರಿ ಹಲವು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Modi 3.0 Cabinet: ನಡ್ಡಾ To ಎಚ್‌ಡಿಕೆ ; ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು