ನವ ದೆಹಲಿ: ತಮ್ಮ ಪುತ್ರಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ನೆಟ್ಟಾ ಡಿಸೋಜಾ ವಿರುದ್ಧ ಬಿಜೆಪಿ ನಾಯಕಿ ಸ್ಮೃತಿ ಇರಾನಿ ನೋಟಿಸ್ ಜಾರಿಗೊಳಿಸಿದ್ದಾರೆ.
ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇದು ವಿವಾದ ಸೃಷ್ಟಿಸಿದ್ದು, ಇಂಥ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಲಿಖಿತವಾಗಿ ಕ್ಷಮೆ ಯಾಚಿಸಬೇಕು ಹಾಗೂ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿ, ಸ್ಮೃತಿ ಇರಾನಿ ಅವರ ೧೮ ವರ್ಷದ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿತ್ತು. ರೆಸ್ಟೊರೆಂಟ್‌ಗೆ ಮಾತ್ರ ಅನುಮತಿ ನೀಡಿದ್ದರೂ, ಬಾರ್ ಅನ್ನೂ ಅಕ್ರಮವಾಗಿ ನಡೆಸಲಾಗುತ್ತಿತ್ತು ಎಂದು ಆರೋಪಿಸಿದೆ.
ಆದರೆ ಕಾಂಗ್ರೆಸ್ ಪಕ್ಷದ ಆರೋಪವನ್ನು ತಳ್ಳಿ ಹಾಕಿರುವ ಸ್ಮೃತಿ ಇರಾನಿ, ಸಲ್ಲದ ಆರೋಪಗಳ ಮೂಲಕ ತಮ್ಮ ಪುತ್ರಿಯ ತೇಜೋವಧೆಯನ್ನು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಮಾಡಿದ್ದಾರೆ. ” ಅಮೇಥಿಯಲ್ಲಿ ೨೦೧೪ ಮತ್ತು ೨೦೧೯ರಲ್ಲಿ ರಾಹುಲ್ ಗಾಂಧಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ಈ ರೀತಿ ವರ್ತಿಸುತ್ತಿದ್ದಾರೆ. ನನ್ನ ಮಗಳ ತೇಜೋವಧೆ ಮಾಡಿದ್ದಕ್ಕಾಗಿ ಕಾನೂನು ಹೋರಾಟ ಮಾಡಲಾಗುವುದುʼʼ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸ್ಮೃತಿ ಇರಾನಿ ಅವರನ್ನು ಬೆಂಬಲಿಸಿದ್ದು, ” ೧೮ ವರ್ಷ ವಯಸ್ಸಿನ ಹುಡುಗಿಗೆ ಬಹುಶಃ ರೆಸ್ಟೊರೆಂಟ್ ನಡೆಸುವ ಉದ್ಯಮಶೀಲತೆಯ ಉತ್ಸಾಹದಲ್ಲಿ ಪರವಾನಗಿ ಪಡೆಯುವಾಗ ಅದರ ಪ್ರಕ್ರಿಯೆಯಲ್ಲಿ ಏನಾದರೂ ಸಣ್ಣ ಪುಟ್ಟ ಪ್ರಮಾದಗಳು ಆಗಿರಬಹುದು. ಆದರೆ ೧೯ ವರ್ಷ ಮಗಳಿನ ತಾಯಿಯಾಗಿ ನಾನು ಈ ಮಾತನ್ನು ಹೇಳುತ್ತೇನೆ. ಈ ವಿಷಯದಲ್ಲಿ ರಾಜಕೀಯ ಬೆರೆಸುವುದು ಬೇಡʼʼ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿಯ ಹೆಸರನ್ನು ಉಲ್ಲೇಖಿಸದೆ ಟ್ವೀಟ್ ಮಾಡಿದ್ದಾರೆ.
ಏನಿದು ಗೋವಾದಲ್ಲಿ ಅಕ್ರಮ ಬಾರ್ ಪ್ರಕರಣ?: ಗೋವಾ ಮೂಲದ ವಕೀಲ ಏರಿಯಸ್ ರೋಡ್ರಿಗಸ್ ಎಂಬುವರು ಉತ್ತರ ಗೋವಾದಲ್ಲಿರುವ ರೆಸ್ಟೋರೆಂಟ್ ಮತ್ತು ಬಾರ್ ಅನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ದೂರಿದ್ದರು. ಇವರ ದೂರಿನ ಆಧಾರದಲ್ಲಿ ಗೋವಾದ ಅಬಕಾರಿ ಆಯುಕ್ತರು ಕೆಫೆಗೆ ನೋಟಿಸ್ ಜಾರಿಗೊಳಿಸಿದ್ದರು. ಈ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ತಮ್ಮ ಪುತ್ರಿ ಕಾಲೇಜು ವಿದ್ಯಾರ್ಥಿಯಾಗಿದ್ದು, ಯಾವುದೇ ಬಾರ್ ನಡೆಸುತ್ತಿಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದರು. ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ.