ನವ ದೆಹಲಿ: ಗೃಹ ಬಳಕೆಯ 14 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು 350 ರೂಪಾಯಿ ಹೆಚ್ಚಿಸಿದ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಹೀಗೆ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದ ಬೆನ್ನಲ್ಲೇ, 2011ರಲ್ಲಿ ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಾಡಿದ್ದ ಟ್ವೀಟ್ವೊಂದು ವೈರಲ್ ಆಗುತ್ತಿದೆ.
2011ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಗ್ಯಾಸ್ ಸಿಲಿಂಡಿರ್ ಬೆಲೆಯನ್ನು 50 ರೂಪಾಯಿ ಹೆಚ್ಚಿಸಿತ್ತು. ಆಗ ಸ್ಮೃತಿ ಇರಾನಿ ಟ್ವೀಟ್ ಮಾಡಿ, ‘ಎಲ್‌ಪಿಜಿ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದೆ. ಆದರೆ ಇವರು ನಮ್ಮದು ಜನಸಾಮಾನ್ಯರ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಎಂಥಾ ನಾಚಿಕೆಗೇಡು!!!’ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯ ಮಾಡಿದ್ದರು. ಅದೇ ಟ್ವೀಟ್ ಇಟ್ಟುಕೊಂಡು ಕಾಂಗ್ರೆಸ್ ಈಗ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡುತ್ತಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿದ್ದಾಗ, ಇದನ್ನು ವಿರೋಧಿಸಿ ಸ್ಮೃತಿ ಇರಾನಿ ಪ್ರತಿಭಟನೆ ನಡೆಸಿದ್ದರು. ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ನಡೆಸಲಾಗಿದ್ದ ಪ್ರತಿಭಟನೆಯಲ್ಲಿ ಸ್ಮೃತಿ ಇರಾನಿ ಕೂಡ ಪಾಲ್ಗೊಂಡಿದ್ದರು. ಆ ಫೋಟೋವನ್ನು ಕೂಡ ಈಗ ಕಾಂಗ್ರೆಸ್ ಶೇರ್ ಮಾಡಿಕೊಂಡಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 400 ರೂಪಾಯಿಗಿಂತಲೂ ಕಡಿಮೆ ಇದ್ದಾಗಲೇ ಸ್ಮೃತಿ ಇರಾನಿ, ಸಿಲಿಂಡರ್‌ನೊಂದಿಗೆ
ಎಲ್‌ಪಿಜಿ ಸಿಲಿಂಡರ್ ಬೆಲೆ 400 ರೂಪಾಯಿಗಿಂತ ಕಡಿಮೆ ಇದ್ದಾಗ ಸ್ಮೃತಿ ಇರಾನಿ ಸಿಲಿಂಡರ್‌ನೊಂದಿಗೆ ರಸ್ತೆಯಲ್ಲೇ ಕುಳಿತಿದ್ದರು. ಈಗ ಗೃಹಬಳಕೆ ಸಿಲಿಂಡರ್ ಬೆಲೆ 1100 ರೂ.ದಾಟಿದೆ. ಇವತ್ತೂ ರಸ್ತೆಗೆ ಇಳಿಯಬಹುದೇ?’ ಎಂದು ಪಕ್ಷ ಪ್ರಶ್ನಿಸಿದೆ.
ರಾಹುಲ್ ಗಾಂಧಿ ವಾಗ್ದಾಳಿ
ಗೃಹ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳವಾದ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿ ‘ಇದು ಮಿತ್ರಕಾಲ. ಈ ಕಾಲದಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿ, ಅದರ ಮಿತ್ರರ ಜೇಬನ್ನು ತುಂಬಿಸುತ್ತಿದೆ. 2014ರಲ್ಲಿ ಒಂದು ಸಿಲಿಂಡರ್ ಬೆಲೆ 410 ರೂಪಾಯಿ ಇತ್ತು. ಸಬ್ಸಿಡಿ 827 ರೂಪಾಯಿ ಇತ್ತು. ಈಗ 2023, ಬಿಜೆಪಿ ಆಡಳಿತದಲ್ಲಿ ಸಿಲಿಂಡರ್ ಬೆಲೆ ಸಾವಿರ ದಾಟಿದೆ. ಸಬ್ಸಿಡಿ ಇಲ್ಲವೇ ಇಲ್ಲ ಎಂದಿದ್ದಾರೆ.