ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪದ್ಮ ಪ್ರಶಸ್ತಿ (Padma Awards 2023) ನೀಡುವ ಪದ್ಧತಿಯೇ ಬದಲಾಗಿದೆ. ತೆರೆಮರೆಯ ಸಾಧಕರು, ಗ್ರಾಮೀಣ, ಬುಡಕಟ್ಟು ಸಾಧಕರು ಕೂಡ ಪದ್ಮ ಪ್ರಶಸ್ತಿ ಪಡೆಯುತ್ತಿದ್ದಾರೆ. ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪಡೆದು ದೇಶಾದ್ಯಂತ ಸುದ್ದಿಯಾಗುತ್ತಿದ್ದಾರೆ. ಅಷ್ಟರಮಟ್ಟಿಗೆ ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಯನ್ನು ಜನ ಸಾಮಾನ್ಯರಿಗೂ ಸಿಗುವಂತೆ ಮಾಡಿದೆ. ಇದರಂತೆ, 2023ರ ಸಾಲಿನಲ್ಲೂ ಜನಸಾಮಾನ್ಯರಿಗೆ ಪ್ರಶಸ್ತಿ ನೀಡಲಾಗಿದೆ. ತಮಿಳುನಾಡಿನಲ್ಲಿ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದ ಇಬ್ಬರಿಗೆ ಜಂಟಿಯಾಗಿ ಪದ್ಮಶ್ರೀ ಪ್ರಶಸ್ತಿ ಘೋಷಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಹೌದು, ಇರುಳ ಬುಡಕಟ್ಟು ಸಮುದಾಯದವರಾದ ವಡಿವೇಲ್ ಗೋಪಾಲ್ ಹಾಗೂ ಮಾಸಿ ಸಾದಿಯಾನ್ ಅವರಿಗೆ ಜಂಟಿಯಾಗಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಯಾವುದೇ ವಿಷಕಾರಿ ಹಾವುಗಳನ್ನು ಬೇಕಾದರೂ ಹಿಡಿಯುವ ಸಾಮರ್ಥ್ಯ ಹೊಂದಿರುವ ಇವರು ಶಿಕ್ಷಣ, ವಿಶೇಷ ಕೌಶಲ ಕಲಿಯದೆಯೇ, ಸ್ಥಳೀಯ ಕೌಶಲಗಳಿಂದಲೇ ಇವರು ಜಗತ್ತಿನ ಹಲವು ರಾಷ್ಟ್ರಗಳನ್ನು ಸುತ್ತಿದ್ದಾರೆ. ಅಲ್ಲಿಯೂ ಹಾವು ರಕ್ಷಣೆ ಮಾಡಿ ಬಂದಿದ್ದಾರೆ.
2017ರಲ್ಲಿ ಇವರಿಬ್ಬರನ್ನು ಅಮೆರಿಕದ ಫ್ಲೊರಿಡಾಗೆ ಕರೆದುಕೊಂಡು ಹೋಗಲಾಗಿತ್ತು. ಫ್ಲೊರಿಡಾ ವಿಶ್ವವಿದ್ಯಾಲಯವು ಇವರನ್ನು ಕರೆದುಕೊಂಡು ಹೋಗಿತ್ತು. ಇಬ್ಬರೂ ಅಮೆರಿಕದಲ್ಲಿ 27 ಹೆಬ್ಬಾವುಗಳನ್ನು ಹಿಡಿದಿದ್ದರು. ಇವರಿಬ್ಬರ ಸಮಾಜ ಕಾರ್ಯಕ್ಕೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
ಇದನ್ನೂ ಓದಿ: Padma Awards 2023: ಜನಸಾಮಾನ್ಯರಿಂದ ಹಿಡಿದು ಅಸಾಮಾನ್ಯ ಸಾಧಕರಿಗೆ ಪದ್ಮ ಗೌರವ, ಇಲ್ಲಿದೆ ಪಟ್ಟಿ