ಹಾವು ನೋಡಿದರೆ ಬಹುತೇಕರಿಗೆ ಭಯ. ಅದು ಸಣ್ಣ ಹಾವಿರಲಿ, ದೊಡ್ಡ ಗಾತ್ರದ ಹಾವೇ ಆಗಲಿ, ಅದನ್ನು ನೋಡಿದರೆ ಹಿಂದಕ್ಕೆ ಓಡುತ್ತೇವೆ. ಇಂಥ ಹಾವು ಆಸ್ಪತ್ರೆಯಲ್ಲಿ (Snake in Hospital) ಕಾಣಿಸಿಕೊಂಡರೆ.?!. ಅದೂ ಉದ್ದನೆಯ, ದೊಡ್ಡದಾದ ಹಾವು !
ತೆಲಂಗಾಣದ ವಾರಂಗಲ್ನಲ್ಲಿರುವ ಮಹಾತ್ಮ ಗಾಂಧಿ ಮೆಮೋರಿಯಲ್ (ಎಂಜಿಎಂ) ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಮಲಗಿದ್ದ ಮಂಚದ ಕೆಳಗೆ ಉದ್ದನೆಯ, ದೊಡ್ಡದಾದ ಹಾವೊಂದು ಹರಿದುಬಂದಿದೆ. ಅದು ನೋಡಲು ನಾಗರ ಹಾವಿನಂತೆ ಇದ್ದರೂ, ಯಾವ ಹಾವು ಎಂಬುದು ಖಚಿತವಾಗಿಲ್ಲ. ಆ ವಾರ್ಡ್ಗೆ ಅದ್ಯಾವಾಗ ಹಾವು ಬಂದು ಸೇರಿಕೊಂಡಿತ್ತೋ ಗೊತ್ತಿಲ್ಲ. ಅಲ್ಲಿದ್ದ ಎಲ್ಲ ರೋಗಿಗಳಿಗೆ, ಅವರ ಆರೈಕೆಗಾಗಿ ಬಂದು ಅಲ್ಲಿ ಉಳಿದುಕೊಂಡಿದ್ದವರ ಜೀವ ನಡುಗಿಸಿದೆ. ಕೂಡಲೇ ಆಸ್ಪತ್ರೆ ಸಿಬ್ಬಂದಿಯೂ ಅಲ್ಲಿಗೆ ಓಡಿಬಂದಿದ್ದರು.
ಆಸ್ಪತ್ರೆಯ ವಾರ್ಡ್ಗೆ ಬಂದ ಹಾವಿನ ವಿಡಿಯೊವನ್ನು ಪತ್ರಕರ್ತ ಆಶಿಶ್ ಎಂಬುವರು ಶೇರ್ ಮಾಡಿಕೊಂಡಿದ್ದಾರೆ. ಹಾಗೇ, ಒಂದೇ ತಿಂಗಳಲ್ಲಿ ಇದು ಎರಡನೇ ಸಲ ಈ ಆಸ್ಪತ್ರೆಗೆ ಹಾವು ಬರುತ್ತಿರುವುದು ಎಂದೂ ಹೇಳಿದ್ದಾರೆ. ತೆಲಂಗಾಣದ ಉತ್ತರ ಭಾಗದಲ್ಲಿರುವ ಅತ್ಯಂತ ದೊಡ್ಡ ಮತ್ತು ಹಳೆಯ ಸರ್ಕಾರಿ ಆಸ್ಪತ್ರೆ ಇದಾಗಿದೆ. ಅಕ್ಟೋಬರ್ 13ರಂದು ಇದೇ ಮಹಾತ್ಮ ಗಾಂಧಿ ಮೆಮೋರಿಯಲ್ ಆಸ್ಪತ್ರೆಯ ವಾಶ್ರೂಮ್ನಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು.
ಇಲಿಗಾಗಿ ಬರುವ ಹಾವುಗಳು !
ತೆಲಂಗಾಣದ ಈ ಆಸ್ಪತ್ರೆಯಲ್ಲಿ ಇಲಿಗಳು ಇವೆ ಎಂದು ಅಲ್ಲಿ ಅಡ್ಮಿಟ್ ಆದ ಅನೇಕ ರೋಗಿಗಳು ದೂರಿದ್ದಾರೆ. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಐಸಿಯುವಿನಲ್ಲಿ ಇದ್ದ ರೋಗಿಯೊಬ್ಬರ ಕಾಲು-ಕೈಗಳಿಗೆ ಇಲಿ ಕಡಿದಿದ್ದಾಗಿ ವರದಿಯಾಗಿತ್ತು. ಮೊದಲೇ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಸ್ಥಿತಿ, ಇಲಿ ಕಡಿದ ಬಳಿಕ ಇನ್ನಷ್ಟು ಗಂಭೀರ ಸ್ಥಿತಿಗೆ ತಲುಪಿತ್ತು. ಅದಾಗಿ ಎರಡೇ ದಿನಕ್ಕೆ ಅವರು ಮೃತಪಟ್ಟಿದ್ದರು. ಹೀಗೆ ಇಲಿಗಳು ಇರುವ ಕಾರಣಕ್ಕಾಗಿಯೇ ಹಾವುಗಳು ಬರುತ್ತಿವೆ ಎಂದೂ ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಇಲಿ ಇರುವುದೂ, ಅದನ್ನು ತಿನ್ನಲು ಹಾವು ಬರುವುದೆಲ್ಲ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದೂ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Viral Video | ಅಪ್ಪನ ಬಿಳಿ ಕಾರಿನ ಮೇಲೆ ಅಮ್ಮನ ಲಿಪ್ಸ್ಟಿಕ್ನಿಂದ ಚಿತ್ತಾರ; ಸೃಷ್ಟಿಕರ್ತ ತುಂಟ ಪುತ್ರ !