Site icon Vistara News

Viral Video: ಶೂ ಒಳಗೆ ಕಾಲಿಡುವ ಮುನ್ನ ಎಚ್ಚರ; ನಾಗರಹಾವು ಕುಳಿತಿರುತ್ತದೆ! ಇಲ್ಲಿದೆ ವಿಡಿಯೊ

Snake Viral Video

snake-hiding-inside-shoe

ನವದೆಹಲಿ: ʼನಾಗರ ಹಾವೇ, ಹಾವೊಳು ಹೂವೆʼ ಎನ್ನುವ ಪದ್ಯ ಹೇಳಿಕೊಂಡೇ ಬೆಳೆದವರು ನಾವೆಲ್ಲ. ಆದರೆ ಹಾವು (Snake) ಎಂದರೆ ಯಾರಿಗೆ ತಾನೇ ಭಯ ಇಲ್ಲ. ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಈ ಉರಗ ಕಂಡರೆ ಮಾರು ದೂರ ಹಾರಿ ಹೋಗುವವರೇ ಅಧಿಕ. ಚಿಕ್ಕಂದಿನಿಂದಲೇ ಇವು ಅಪಾಯಕಾರಿ ಎನ್ನುವ ಭಾವನೆ ನಮ್ಮಲ್ಲಿ ಬೇರು ಬಿಟ್ಟಿರುವುದೇ ಇದಕ್ಕೆ ಕಾರಣ. ಇವು ತಮ್ಮ ಶರೀರವನ್ನು ಹೇಗೆ ಬೇಕಾದರೂ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಇವು ಸಿಗುವ ಸಣ್ಣ ಸ್ಥಳವನ್ನೂ ತಮ್ಮ ಅಡಗು ತಾಣವನ್ನಾಗಿ ಮಾಡಿಕೊಳ್ಳುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತವೆ. ಕೆಲವೊಮ್ಮೆ ಆಹಾರ ಹುಡುಕಿಕೊಂಡು ಮನೆಯೊಳಗೂ ಲಗ್ಗೆ ಇಡುತ್ತವೆ. ಮಾತ್ರವಲ್ಲ ಹಾವುಗಳು ಪೈಪ್‌, ವಾಹನ, ಶೂ ಒಳಗೆ ಅಡಗಿ ಕೂರುತ್ತವೆ. ಇದೀಗ ಹಾವೊಂದು ಶೂ ಒಳಗಿನಿಂದ ಹೊರ ಬರುವ ದೃಶ್ಯ ವೈರಲ್‌ (Viral video) ಆಗಿದೆ.

ಈ ವಿಡಿಯೊದಲ್ಲಿ ಹಾವೊಂದು ಶೂ ಒಳಗೆ ಅಡಗಿ ಕುಳಿತುಕೊಳ್ಳುವ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೊಬ್ಬರು ಶೂ ಎತ್ತಿ ಕ್ಯಾಮರಾದ ಹತ್ತಿರ ತಂದು ಹಾವು ಹೇಗೆ ಅದರೊಳಗೆ ಅಡಗಿ ಕೂತಿದೆ ಎನ್ನುವುದನ್ನು ತೋರಿಸಿದ್ದಾರೆ. ಇದನ್ನು ನೋಡಿ ಅನೇಕರು ಕೂತಲ್ಲಿಯೇ ಬೆಚ್ಚಿ ಬಿದ್ದಿದ್ದಂತೂ ಸುಳ್ಳಲ್ಲ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌

ಮೊದಲ ಬಾರಿಗೆ ಇಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ಈ ವೀಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈಗಾಗಲೇ 2.53 ಲಕ್ಷ ಮಂದಿ ಈ ವಿಡಿಯೊವನ್ನು ನೋಡಿದ್ದಾರೆ ಮತ್ತು ಸುಮಾರು 8,300 ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. ಜತೆಗೆ ತರಹೇವಾರಿ ಕಮೆಂಟ್‌ಗಳು ಕಾಣಿಸಿಕೊಂಡಿವೆ.

ನೆಟ್ಟಿಗರು ಏನಂತಾರೆ?

‌ʼಬಿ ಸೇಫ್‌ ಬಿ ಅಲರ್ಟ್ʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ʼಹೊಸ ಭಯ ಹುಟ್ಟಿಕೊಂಡಿದೆʼ ಎಂದು ಒಬ್ಬರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ʼಹುಷಾರಾಗಿರಿʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ನೋಡುಗರಲ್ಲಿ ಈ ವೀಡಿಯೋ ಭಯವನ್ನು ಹುಟ್ಟು ಹಾಕಿದೆ. ಇದನ್ನು ನೋಡಿದ ಪ್ರತಿಯೊಬ್ಬರೂ ಇನ್ನು ಮುಂದೆ ಶೂ ಧರಿಸುವ ಮುನ್ನ ಎರಡೆರಡು ಬಾರಿ ಪರೀಕ್ಷಿಸಲಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇದನ್ನೂ ಓದಿ: Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರ

ಎಲ್ಲವೂ ವಿಷಕಾರಿಯಲ್ಲ

ನಮ್ಮ ಪರಿಸರದ ಸಮತೋಲನದಲ್ಲಿ ಹಾವುಗಳ ಪಾತ್ರ ಮುಖ್ಯ. ಬೆಳೆಗಳನ್ನು ನಾಶ ಮಾಡುವ, ಅನೇಕ ಕಾಯಿಲೆಗಳ ಹರಡುವಿಕೆಗೆ ಕಾರಣವಾಗುವ ಇಲಿ, ಹೆಗ್ಗಣ ಮುಂತಾದ ಪ್ರಾಣಿಗಳ ಸಂಖ್ಯೆಯನ್ನು ಇವು ನಿಯಂತ್ರಿಸುತ್ತವೆ. ಅದೇ ರೀತಿ ಎಲ್ಲಾ ಹಾವುಗಳು ವಿಷಕಾರಿಯಲ್ಲ ಎನ್ನುವುದು ವಿಶೇಷ. ಹೀಗಾಗಿ ಹಾವು ಕಂಡ ಕೂಡಲೇ ಅವು ಅಪಾಯಕಾರಿಯೆಂದು ಹೊಡೆದು ಕೊಲ್ಲುವುದು ತಪ್ಪು ಎಂದು ಪರಿಸರ ತಜ್ಞರು ಹೇಳುತ್ತಾರೆ. ನೂರಾರು ತಳಿಯ ಉರಗಗಳ ಪೈಕಿ ಬೆರಳೆಣಿಕೆಯ ಹಾವುಗಳಷ್ಟೇ ವಿಷ ಹೊಂದಿವೆ. ಬೇಸರದ ಸಂಗತಿ ಎಂದರೆ ಆವಾಸ ಸ್ಥಾನ ನಾಶದಿಂದ ನೇಕ ಉರಗ ಪ್ರಬೇಧಗಳ ಸಂತತಿ ಈಗ ನಾಶವಾಗುವ ಭೀತಿ ಎದುರಿಸುತ್ತಿವೆ. ಹಾವುಗಳು ಭೀತಿಯಿಂದ ಕಡಿಯುತ್ತವೆಯೇ ಹೊರತು ಸುಮ್ಮನೆ ಮನುಷ್ಯನ ತಂಟೆಗೆ ಬರುವುದಿಲ್ಲ ಎಂದು ಉರಗ ತಜ್ಞರು ಎಷ್ಟು ಎಚ್ಚರಿಸಿದರೂ ಅದನ್ನು ಹೊಡೆದು ಕೊಲ್ಲುವ ಪ್ರವೃತ್ತಿ ಇನ್ನೂ ಕಡಿಮೆಯಾಗಿಲ್ಲ.

Exit mobile version