Site icon Vistara News

Sharad Yadav Passes Away | ಜೆಪಿ ಚಳವಳಿ ಸ್ಫೂರ್ತಿ, ಲೋಹಿಯಾವಾದಿ, ಸಮಾಜವಾದದ ಪರಿಪಾಲಕ ಶರದ್‌ ಯಾದವ್

Sharadh Yadav Passes Away

ಪಟನಾ: ಕೇಂದ್ರದ ಮಾಜಿ ಸಚಿವ, ಆರ್‌ಜೆಡಿ ವರಿಷ್ಠ ಶರದ್‌ ಯಾದವ್‌ ಅವರು (Sharad Yadav Passes Away) ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಎಲ್ಲ ನಾಯಕರು ಶರದ್‌ ಯಾದವ್‌ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

ಕಾಲೇಜು ಹಂತದಲ್ಲಿ ಜಾಣ ವಿದ್ಯಾರ್ಥಿಯಾಗಿ, ಎಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ಚಿನ್ನದ ಪದಕ ಪಡೆದರೂ ಶರದ್‌ ಯಾದವ್‌ ಅವರು ರಾಜಕೀಯ ಪ್ರವೇಶಿಸಿದ್ದು, ದಶಕಗಳವರೆಗೆ ರಾಜಕೀಯ ಜೀವನದಲ್ಲಿ ಇದ್ದು ಹತ್ತಾರು ಸಾಧನೆ ಮಾಡಿದ್ದು ವಿಶೇಷವಾಗಿದೆ. ಹಾಗಾದರೆ, ಶರದ್‌ ಯಾದವ್‌ ಅವರ ರಾಜಕೀಯ ಜೀವನ ಹೇಗೆ ಆರಂಭವಾಯಿತು? ಅವರ ಹಿನ್ನೆಲೆ ಏನು? ಯಾದವ್‌ ಅವರು ಹೇಗೆ ಏಳಿಗೆ ಹೊಂದಿದರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಧ್ಯಪ್ರದೇಶದಲ್ಲಿ ಜನನ, ಬಿಹಾರದಲ್ಲಿ ರಾಜಕೀಯ ಜೀವನ
ಶರದ್‌ ಯಾದವ್‌ ಅವರು ಮಧ್ಯಪ್ರದೇಶದ ಹೋಶಂಗಾಬಾದ್‌ ಜಿಲ್ಲೆಯ ಬಬಾಯಿ ಗ್ರಾಮದಲ್ಲಿ 1947ರ ಜುಲೈ 1ರಂದು ಜನಿಸಿದರು. ಜಬಲ್ಪುರದಲ್ಲಿರುವ ರಾಬರ್ಟ್‌ಸನ್‌ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ ಅವರು ನಂತರ ಜಬಲ್ಪುರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಎಂಜಿನಿಯರಿಂಗ್‌ ಪದವಿ ಪಡೆದರು. ರೇಖಾ ಯಾದವ್‌ ಅವರನ್ನು 1989ರಲ್ಲಿ ಮದುವೆಯಾದ ಇವರಿಗೆ ಒಬ್ಬ ಮಗಳು ಹಾಗೂ ಮಗ ಇದ್ದಾರೆ. ಆರಂಭದಲ್ಲಿ ಇವರು ಎಂಜಿನಿಯರಿಂಗ್‌ ವೃತ್ತಿ ಕೈಗೊಂಡರು. ಆದರೆ, ಶರದ್‌ ಯಾದವ್‌ ಅವರ ರಾಜಕೀಯ ಜೀವನ ಏಳಿಗೆ ಹೊಂದಿದ್ದು ಮಾತ್ರ ಬಿಹಾರದಿಂದ.

ಜೆಪಿ ಚಳವಳಿ, ಸಂಸದರಾದ ಶರದ್‌ ಯಾದವ್
1970ರಲ್ಲಿ ಜಬಲ್ಪುರದಲ್ಲಿ ಅಧ್ಯಯನ ಮಾಡುವಾಗಲೇ ಶರದ್‌ ಯಾದವ್‌ ಅವರು ಜಬಲ್ಪುರ ವಿವಿಯ ವಿದ್ಯಾರ್ಥಿ ನಾಯಕರಾಗಿದ್ದರು. ಜೆಪಿ ಚಳವಳಿಯಿಂದ ಪ್ರೇರೇಪಿತರಾದ, ಡಾ.ಲೋಹಿಯಾ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದ ಯಾದವ್‌, ಇಂದಿರಾ ಗಾಂಧಿ ವಿರುದ್ಧ ಆರಂಬವಾದ ಜೆಪಿ ಚಳವಳಿಯಲ್ಲಿ ಭಾಗವಹಿಸಿದರು. ಅದರಲ್ಲೂ, ಜಯಪ್ರಕಾಶ್‌ ನಾರಾಯಣ್‌ ಅವರ ಆಪ್ತರಾದ ಶರದ್‌ ಯಾದವ್‌, 1974ರಲ್ಲಿ ಜಬಲ್ಪುರ ಲೋಕಸಭೆ ಕ್ಷೇತ್ರದಲ್ಲಿ ಗೆದ್ದು, ಸಂಸತ್‌ ಪ್ರವೇಶಿಸಿದರು. ಆ ಮೂಲಕ ರಾಜಕೀಯ ಜೀವನ ಆರಂಭಿಸಿದರು. ತುರ್ತುಪರಿಸ್ಥಿತಿಯಲ್ಲಿ ಹೋರಾಡಿದ ಯಾದವ್‌, 1977ರಲ್ಲಿ ಮತ್ತೆ ಜಬಲ್ಪುರ ಕ್ಷೇತ್ರದಿಂದ ಆಯ್ಕೆಯಾದರು.

ಬಳಿಕ ಚರಣ್‌ ಸಿಂಗ್‌ ಬಣ ಸೇರಿದ ಯಾದವ್‌, ಬಳಿಕ ಉತ್ತರ ಪ್ರದೇಶದ ಬದೌನ್‌ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದರು. ಇದಾದ ನಂತರ ಬಿಹಾರದಲ್ಲಿ ರಾಜಕೀಯ ನೆಲೆ ಕಂಡುಕೊಂಡ ಶರದ್‌ ಯಾದವ್‌, ಮಾದೇಪುರ ಕ್ಷೇತ್ರದಲ್ಲಿ 1991, 1996, 1999 ಹಾಗೂ 2009ರಲ್ಲಿ ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾದರು. ಕಾಂಗ್ರೆಸ್‌ಅನ್ನು ವಿರೋಧಿಸುತ್ತಿದ್ದ ಅವರು ವಿ.ಪಿ. ಸಿಂಗ್‌ ಅವರು ಪ್ರಧಾನಿಯಾಗುವಲ್ಲಿ ರಣತಂತ್ರ ರೂಪಿಸಿದರು. ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ವಿ.ಪಿ.ಸಿಂಗ್‌ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಯಾದವ್‌ ಸಚಿವರಾಗಿದ್ದರು.

ಸಂಯುಕ್ತ ಜನತಾದಳ ಪಕ್ಷ ಸ್ಥಾಪನೆ
1987ರಲ್ಲಿ ಶರದ್‌ ಯಾದವ್‌ ಅವರು ಸಂಯುಕ್ತ ಜನತಾದಳ ಪಕ್ಷವನ್ನು ಸ್ಥಾಪಿಸಿದರು. ಆ ಪಕ್ಷದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅವರು ನಾಗರಿಕ ವಿಮಾನಯಾನ ಸೇರಿ ಹಲವು ಖಾತೆಗಳನ್ನು ನಿಭಾಯಿಸಿದರು. ಅಲ್ಲದೆ, 2003ರಲ್ಲಿ ಜನತಾ ದಳವನ್ನು ವಿಸ್ತರಿಸಿ, ಸಂಯುಕ್ತ ಜನತಾದಳ ಎಂದು ನಾಮಕರಣ ಮಾಡಲಾಯಿತು. ಜಾರ್ಜ್‌ ಫರ್ನಾಂಡಿಸ್‌ ಅವರು ಇದರ ಅಧ್ಯಕ್ಷರಾದರೆ, ಶರದ್‌ ಯಾದವ್‌ ಸಂಸದೀಯ ಪಕ್ಷದ ನಾಯಕರಾದರು.

2014ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಶರದ್‌ ಯಾದವ್‌, ಬಳಿಕ ನಿತೀಶ್‌ ಕುಮಾರ್‌ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ 2018ರಲ್ಲಿ ಲೋಕತಾಂತ್ರಿಕ ಜನತಾದಳ ಪಕ್ಷ ಸ್ಥಾಪಿಸಿದರು. ಬಳಿಕ 2022ರ ಮಾರ್ಚ್‌ನಲ್ಲಿ ಇದನ್ನು ಆರ್‌ಜೆಡಿ ಜತೆ ವಿಲೀನಗೊಳಿಸಿದರು. ಇಷ್ಟು ಸುದೀರ್ಘ ಅವಧಿಯ ರಾಜಕಾರಣದಲ್ಲಿ ಅವರು ಮೂರು ಬಾರಿ ರಾಜ್ಯಸಭೆಗೂ ಆಯ್ಕೆಯಾದರು. ಕೊನೆಯವರೆಗೂ ಅವರು ಸಮಾಜವಾದದ ಪರಿಪಾಲಕರೇ ಆಗಿದ್ದರು ಎಂಬುದು ಗಮನಾರ್ಹವಾಗಿದೆ.

ಇದನ್ನೂ ಓದಿ | Sharad Yadav Passes Away | ಕೇಂದ್ರದ ಮಾಜಿ ಸಚಿವ, ಆರ್‌ಜೆಡಿ ವರಿಷ್ಠ ಶರದ್‌ ಯಾದವ್‌ ಇನ್ನಿಲ್ಲ, ಕಂಬನಿ ಮಿಡಿದ ಮೋದಿ

Exit mobile version