ಪಂಚಭೂತಗಳಲ್ಲಿ ಒಂದಾದ ಗಾಳಿ ಅದೆಷ್ಟು ಶಕ್ತಿಶಾಲಿ ಎಂಬುದು ಗೊತ್ತಿದೆ. ಬಿರುಗಾಳಿ, ಸುಂಟರಗಾಳಿ, ಚಂಡಮಾರುತ, ಧೂಳು ಸಹಿತ ಗಾಳಿ ಹೀಗೆ ಒಂದೊಂದು ಸ್ವರೂಪದಲ್ಲಿ ಅಬ್ಬರ ತೋರಿಸುತ್ತದೆ. ಇದೀಗ ಟರ್ಕಿಯ ಅಂಕಾರಾದಲ್ಲಿ ವಿಪರೀತ ಗಾಳಿ ಬೀಸುತ್ತಿದೆ. ಜನರಂತೂ ಗಾಳಿಯ ಪ್ರಭಾವಕ್ಕೆ ತತ್ತರಿಸಿ ಹೋಗಿದ್ದಾರೆ. ಅವರಿಗಾಗುತ್ತಿರುವ ಹಾನಿ, ಅಸ್ವಸ್ಥತೆ, ಸಮಸ್ಯೆಯ ಮಧ್ಯೆಯೂ ಒಂದು ಫನ್ನಿ ವಿಡಿಯೊ ವೈರಲ್ (Viral Video) ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೊ ವಿಪರೀತ ಹರಿದಾಡುತ್ತಿದೆ.
ಗುರು ಆಫ್ ನಥಿಂಗ್ ಎಂಬ ಟ್ವಿಟರ್ ಅಕೌಂಟ್ನಲ್ಲಿ ವಿಡಿಯೊ ಶೇರ್ ಮಾಡಲಾಗಿದೆ. ಮನೆಯೊಳಗೆ ಇಟ್ಟಿದ್ದ ಸೋಫಾವೊಂದು ಜೋರಾಗಿ ಹಾರುತ್ತ ಹೋಗಿ ಒಂದೆಡೆ ಬಿದ್ದಿದ್ದನ್ನು ವಿಡಿಯೊದಲ್ಲಿ ನೋಡಬಹುದು. ‘ಆಕಾಶದಲ್ಲೆಲ್ಲ ಕಪ್ಪಾದ ಮೋಡ ತುಂಬಿದೆ. ಎತ್ತರನೆಯ ಅಪಾರ್ಟ್ಮೆಂಟ್ ಇದೆ. ಜೋರಾಗಿ ಬೀಸಿದ ಗಾಳಿ, ಆ ಅಪಾರ್ಟ್ಮೆಂಟ್ನ ಮನೆಯೊಂದರಿಂದ ಸೋಫಾವನ್ನು ಹಾರಿಸಿದೆ. ಸೋಫಾ ಅದೆಷ್ಟು ಎತ್ತರಕ್ಕೆ ಹಾಕಿದೆ ಎಂದರೆ, ನೆಟ್ಟಿಗರು ಅದನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಆಮೇಲೆ ಅದು ಇನ್ನೊಂದು ಅಪಾರ್ಟ್ಮೆಂಟ್ ಬಳಿ ಬಂದು ಬಿದ್ದಿದೆ. ಹೀಗೆ ಹಲವು ಸೋಫಾಗಳು ಗಾಳಿಗೆ ಹಾರಿಸಿಕೊಂಡು ಹೋಗಿವೆ ಎಂದು ವಿಡಿಯೊ ಶೇರ್ ಮಾಡಿಕೊಂಡವರು ತಿಳಿಸಿದ್ದಾರೆ.
ಅದಷ್ಟೋ ಜನರು ಈ ವಿಡಿಯೊವನ್ನು ನೋಡಿದ ಮೇಲೆ ಸೋಫಾವನ್ನು ಅರೇಬಿಯನ್ ನೈಟ್ಸ್ ಅಲ್ಲಾವುದ್ದೀನ್ನ ಮಾಯಾ ಕಾರ್ಪೆಟ್ಗೆ ಹೋಲಿಸಿ ಜೋಕ್ ಮಾಡಿದ್ದಾರೆ. ಅಲ್ಲಾವುದ್ದೀನ್ ತನ್ನ ಕಾರ್ಪೆಟ್ನಲ್ಲಿ ಕುಳಿತು ಹಾರುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ. ಇನ್ನೂ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರಂತೂ ಕಮೆಂಟ್ ಮಾಡಿ ‘ಅದೃಷ್ಟಕ್ಕೆ ಹೀಗೆ ಸೋಫಾ ಹಾರಿ ಹೋಗುವಾಗ ಅದರಲ್ಲಿ ಯಾರೂ ಕುಳಿತಿರಲಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಜ್ವಾಲಾಮುಖಿ ಪಾನಿಪುರಿ ಗೊತ್ತಾ?-ಈ ವಿಡಿಯೊ ನೋಡಿದ ಮೇಲೆ ಬಾಯಲ್ಲಿ ಲಾಲಾರಸ ಹೆಚ್ಚಬಹುದು!
ಅಂಕಾರಾದಲ್ಲಿ ಗಾಳಿಯ ವೇಗ ಗಂಟೆಗೆ 78 ಕಿಮೀ ವೇಗ ತಲುಪಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಯಾರೂ ಮನೆ ಬಿಟ್ಟು ಹೊರಗೆ ಬರಬೇಡಿ ಎಂದಿದ್ದಾರೆ. ಒಂದೆಡೆ ಗಾಳಿ ಮತ್ತು ಇನ್ನೊಂದೆಡೆ ಮಳೆಗೆ ಇಡೀ ನಗರ ತತ್ತರಿಸುತ್ತಿದೆ. ಮರಗಳು ಬುಡಸಹಿತ ಕಿತ್ತು ಬೀಳುತ್ತಿವೆ. ಕಟ್ಟಡದ ಕಿಟಕಿಗಳು ಒಡೆದು ಬೀಳುತ್ತಿವೆ.