Site icon Vistara News

Manipur Violence: ಮಣಿಪುರದಲ್ಲಿ ಸೈನಿಕನ ಅಪಹರಿಸಿ ಹತ್ಯೆ; ಯೋಧನಿಗೇ ಹೀಗಾದರೆ ಜನರ ಪಾಡೇನು?

Manipur Soldier

Soldier on leave kidnapped from his home in Manipur, killed

ಇಂಫಾಲ: ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ನಿಯಂತ್ರಣಕ್ಕೆ (Manipur Violence) ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡರೂ ಹಿಂಸೆ ನಿಲ್ಲುತ್ತಿಲ್ಲ. ಸಾವಿರಾರು ಯೋಧರನ್ನು ನಿಯೋಜಿಸಿದರೂ, ಭದ್ರತೆಗೆ ಕ್ರಮ ತೆಗೆದುಕೊಂಡರೂ ಪರಿಸ್ಥಿತಿ ತಹಬಂದಿಗೆ ಬರುತ್ತಿಲ್ಲ. ಸಾಮಾನ್ಯ ಜನರು ಬಿಡಿ, ಮಣಿಪುರದಲ್ಲಿ ಯೋಧರಿಗೂ ರಕ್ಷಣೆ ಇಲ್ಲದಂತಾಗಿದೆ. ರಜೆಗೆಂದು ಮನೆಗೆ ಆಗಮಿಸಿದ್ದ ಯೋಧರೊಬ್ಬರನ್ನು ಅಪಹರಿಸಿ, ಹತ್ಯೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಹೌದು, ಸಿಪಾಯಿ ಸೆರ್ಟೊ ಥಂಗ್‌ಥಾಂಗ್‌ ಕೋಮ್‌ (Sepoy Serto Thangthang Kom) ಅವರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಇಂಫಾಲ ಪಶ್ಚಿಮ ಜಿಲ್ಲೆಯವರಾದ ಸಿಪಾಯಿ ಸೆರ್ಟೊ ಥಂಗ್‌ಥಾಂಗ್‌ ಕೋಮ್‌ ಅವರು ರಜೆಗೆಂದು ಮನೆಗೆ ಬಂದಿದ್ದರು. ಅವರನ್ನು ಶನಿವಾರ (ಸೆಪ್ಟೆಂಬರ್‌ 16) ಮನೆಯಿಂದಲೇ ಅಪಹರಣ ಮಾಡಲಾಗಿತ್ತು. ಆದರೆ, ಅವರ ಶವವು ಭಾನುವಾರ (ಸೆಪ್ಟೆಂಬರ್‌ 17) ಪತ್ತೆಯಾಗಿದೆ. ಇದು ಈಗ ಮಣಿಪುರ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಮನೆಗೆ ನುಗ್ಗಿ ಅಪಹರಣ

“ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮೂವರು ಶಸ್ತ್ರಧಾರಿಗಳು ಮನೆಗೆ ನುಗ್ಗಿದರು. ನನ್ನ ತಂದೆಯನ್ನು ಮೂವರೂ ಬಲವಂತ ಮಾಡಿ ಕಾರಿನಲ್ಲಿ ಕೂರಿಸಿದರು” ಎಂದು ಯೋಧನ 10 ವರ್ಷದ ಮಗ ತಿಳಿಸಿದ್ದಾನೆ. ಇಂಫಾಲ ಪೂರ್ವ ಜಿಲ್ಲೆಯ ಖುನಿಂಗ್‌ಥೆಕ್‌ ಗ್ರಾಮದ ಬಳಿ ಯೋಧನ ಶವ ಪತ್ತೆಯಾಗಿದೆ. ಇವರು ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಇನ್ನು ಯೋಧನ ಹತ್ಯೆಯನ್ನು ಸೇನೆಯು ಖಂಡಿಸಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.

ಇದನ್ನೂ ಓದಿ: Manipur Violence: ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ಸೇನಾಧಿಕಾರಿಗೆ ಮಣಿಪುರ ಹಿಂಸಾಚಾರ ತಡೆಯುವ ಹೊಣೆ!

ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯೊಬ್ಬರ ಸಹೋದರನನ್ನು ಕೊಲೆ ಮಾಡಿದ್ದಾರೆ. ನಮ್ಮ ಮೇಲೂ ಹಲ್ಲೆಯಾಗಿದೆ ಎಂದು ಮಹಿಳೆಯರ ಕುಟುಂಬಸ್ಥರು ತಿಳಿಸಿದ್ದಾರೆ. ಮೇ 4ರಂದೇ ಘಟನೆ ನಡೆದಿದ್ದು, ಇದುವರೆಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 150 ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದರು.

Exit mobile version